ಮಂಗಳೂರು: ಹನಿ ಟ್ರಾಪ್; ಮೂವರು ಆರೋಪಿಗಳ ಸೆರೆ

Update: 2018-03-23 17:24 GMT

ಮಂಗಳೂರು, ಮಾ. 23: ನಗರದ ಮೇರಿಹಿಲ್ ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಮಸಾಜ್ ಹೆಸರಲ್ಲಿ ಹನಿಟ್ರಾಪ್ ಮಾಡಿ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮೂಡಿಗೆರೆ ಕಳದ ರವಿ ಗೌಡ (42), ಬಿಜೈ ಜೈಲ್ ರಸ್ತೆಯ ಪ್ರೀತೇಶ್ (36) ಮತ್ತು ಪಡೀಲ್ ಕೊಡಕ್ಕಲ್ ನ ರಮೇಶ್ (35) ಬಂಧಿತ ಆರೋಪಿಗಳು.

ಆರೋಪಿಗಳಿಂದ 1,50,000 ರೂ. ಮತ್ತು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾ. 20ರಂದು ವ್ಯಕ್ತಿಯೊಬ್ಬರಿಗೆ ಮಸಾಜ್ ಮಾಡುವ ನೆಪದಲ್ಲಿ ಬಾಡಿಗೆ ಮನೆಯೊಂದಕ್ಕೆ ಕರೆಸಿಕೊಂಡು ನಂತರ ಮನೆಗೆ ಹೋದ ಕೂಡಲೇ 2-3 ಅಪರಿಚಿತ ಯುವಕರು ಏಕಾಎಕಿ ಮನೆಗೆ ಪ್ರವೇಶಿಸಿ ವ್ಯಕ್ತಿಯನ್ನು ಬಲತ್ಕಾರವಾಗಿ ನಗ್ನಗೊಳಿಸಿ ಯುವತಿಯರ ಜೊತೆ ವೀಡಿಯೊ ಹಾಗೂ ಫೋಟೊ ತೆಗೆದು 3 ಲಕ್ಷ ರೂ. ಹಣಕ್ಕೆ ಬ್ಲಾಕ್ ಮೇಲ್ ಮಾಡಿದ್ದು, ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆ್ಯಪ್, ಫೇಸ್‌ಬುಕ್, ಯೂಟ್ಯೂಬ್ ಗಳಲ್ಲಿ ಹರಿಯ ಬಿಡುವುದಾಗಿ ಬೆದರಿಕೆ ಹಾಕಿ ನಂತರ ಸಂತ್ರಸ್ತ ವ್ಯಕ್ತಿಯಿಂದ 3 ಲಕ್ಷ ರೂ. ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಶಾಂತಾರಾಮ್ ಅವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ಲದೆ, ಕೃತ್ಯದಲ್ಲಿ ಭಾಗಿಯಾದ ಮೂವರು ಮಹಿಳೆಯರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಪೈಕಿ ರವಿ ಗೌಡ ಎಂಬಾತನು ಈ ಹಿಂದೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಹಾಗೂ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಇತರ ಕೆಲವು ವ್ಯಕ್ತಿಗಳಿಗೆ ಇದೇ ರೀತಿ ಹನಿಟ್ರಾಪ್ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ಬಗ್ಗೆ ತನಿಖೆ ಮುಂದುವರಿದೆ.

ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಶಾಂತರಾಮ್, ಪಿಎಸ್‌ಐ ಶ್ಯಾಮ್ ಸುಂದರ್, ಎಎಸ್‌ಐ ಶಶಿಧರ ಶೆಟ್ಟಿ, ಹರೀಶ್ ಹಾಗೂ ಸಿಬ್ಬಂದಿ ರಾಮ ಪೂಜಾರಿ, ಗಣೇಶ್, ಚಂದ್ರಶೇಖರ, ಶೀನಪ್ಪ, ಚಂದ್ರ, ಸುಬ್ರಹ್ಮಣ್ಯ, ಚಂದ್ರಹಾಸ, ಯೋಗೀಶ್, ರಾಜೇಂದ್ರ ಪ್ರಸಾದ್, ಅಬ್ದುಲ್ ಜಬ್ಬಾರ್, ಮಣಿ, ಪ್ರಶಾಂತ್ ಶೆಟ್ಟಿ, ಅಶಿತ್ ಡಿ ಸೋಜಾ, ತೇಜಕುಮಾರ್ ಹಾಗೂ ರಿತೇಶ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News