ಬಂಟ್ವಾಳ: ಆರ್ ಟಿ ಐ ಕಾರ್ಯಕರ್ತ ನಿಗೂಢ ಮೃತ್ಯು ?

Update: 2018-03-24 17:55 GMT

ಬಂಟ್ವಾಳ, ಮಾ. 24: ಬಂಟ್ವಾಳದ ರೈತ ಮುಖಂಡರೊಬ್ಬರು ನೇತ್ರಾವತಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾದ ಘಟನೆ ನಂದಾವರ ನದಿ ತಟದಲ್ಲಿ ಶನಿವಾರ ನಡೆದಿದೆ.

ಮಾರ್ನಬೈಲು ನಿವಾಸಿ ಶರತ್ ( 48) ಮೃತ ರೈತ ಎಂದು ಗುರುತಿಸಲಾಗಿದೆ.

ಅವರು ಇಂದು ಬೆಳಗ್ಗೆ ಆರು ಗಂಟೆಯ ಸುಮಾರಿಗೆ ಮಾರ್ನಬೈಲು ಮನೆಯಿಂದ ನಂದಾವರ ದೇವಸ್ಥಾನಕ್ಕೆ ಹೋಗಿ, ನಂತರ ಸ್ನಾನ ಮಾಡಲು ನದಿಗೆ ತೆರಳಿದ್ದು ಈ ಸಂದರ್ಭ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ.

ಸ್ಥಳೀಯ ಮುಳುಗು ತಜ್ಞರು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

ಮೃತ ಶರತ್ ಅವರು ರೈತ ಹಸಿರು ಸೇನೆ ಸಂಘಟನೆಯ ಸದಸ್ಯ ಮತ್ತು ಹಲವು  ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರು.

ಆರ್‌ಟಿಐ ಕಾರ್ಯಕರ್ತ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷರಾಗಿದ್ದ ಶರತ್, ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತರ ಹೋರಾಟ, ಎತ್ತಿನಹೊಳೆ ಹೋರಾಟ ಹಾಗೂ ಸ್ಥಳೀಯವಾಗಿ ಯುವಕ ಸಂಘಗಳಲ್ಲಿ ಮುಂಚೂಣಿಯಲ್ಲಿದ್ದರು. ರೈತರಾಗಿದ್ದ ಅವರು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದು, ಆರ್‌ಟಿಐ ಕಾರ್ಯಕರ್ತರಾಗಿಯೂ ಜನರೊಂದಿಗೆ ಬೆರೆಯುತ್ತಿದ್ದರು. ರೈತ ಸಂವಾದ ಏರ್ಪಡಿಸುವುದು, ವಿದ್ಯುತ್ ಬಳಕೆದಾರರ ಚಳವಳಿ ಸಕ್ರಿಯವಾಗುವ ಮೂಲಕ ಸರಕಾರದ ಗಮನಕ್ಕೆ ಜನರ ಸಮಸ್ಯೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು.

ಸಂತಾಪ: ಮೃತರ ಮನೆಗೆ ರೈತ ಸಂಘ ಭೇಟಿ ನೀಡಿ ಸಾಂತ್ವನ ಹೇಳಿದೆ. ತುಂಬೆ ಡ್ಯಾಂ ಸಂತ್ರಸ್ತರ ಹೋರಾಟ ಸಮಿತಿಯಲ್ಲಿ ಸಕ್ರಿಯರಾಗಿದ್ದ ಶರತ್ ಸಾವಿಗೆ ಹೋರಾಟಗಾರರಾದ ಎನ್.ಕೆ.ಇದಿನಬ್ಬ, ಸುದೇಶ್ ಮಯ್ಯ, ಸುಬ್ರಹ್ಮಣ್ಯ ಭಟ್ ಹಾಗೂ ರೈತ ಮುಖಂಡರಾದ ಮನೋಹರ ಶೆಟ್ಟಿ, ಶ್ರೀಧರ ಶೆಟ್ಟಿ ಬೈಲಗುತ್ತು ಮೊದಲಾದವರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News