ಸುಲ್ತಾನ್ ಬತ್ತೇರಿ: ಕಾಲೇಜು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ; ಮೊಬೈಲ್ ಕಿತ್ತುಕೊಂಡ ದುಷ್ಕರ್ಮಿಗಳು

Update: 2018-03-25 10:40 GMT

ಮಂಗಳೂರು, ಮಾ. 24: ನಗರದ ಸುಲ್ತಾನ್ ಬತ್ತೇರಿಯಲ್ಲಿ ಕಾಲೇಜೊಂದರ ಇಬ್ಬರು ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಗಳ ತಂಡವೊಂದು ದೌರ್ಜನ್ಯ ಎಸಗಿದ ಘಟನೆ ಶನಿವಾರ ಸಂಜೆ ನಡೆದಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನು ವಿಟ್ಲ ಸಮೀಪದ ಸಾಬಿತ್ ಮತ್ತು ಬಿ.ಸಿ.ರೋಡ್ ಸಮೀಪದ ಸಮೀರ್ ಎಂದು ಗುರುತಿಸಲಾಗಿದೆ. ಇವರನ್ನು ಇದೀಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರು ವಿದ್ಯಾರ್ಥಿಗಳು ಮತ್ತು ಇಬ್ಬರು ವಿದ್ಯಾರ್ಥಿನಿಯರ ಸಹಿತ ಐವರು ಶನಿವಾರ ಸಂಜೆ ಸುಮಾರು 5 ಗಂಟೆಗೆ ಸುಲ್ತಾನ್ ಬತ್ತೇರಿಯಲ್ಲಿ ವಿಹರಿಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಪಾನಮತ್ತ ದುಷ್ಕರ್ಮಿಗಳ ಐದಾರು ಮಂದಿಯ ತಂಡವೊಂದು ವಿದ್ಯಾರ್ಥಿಗಳನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದೆಯಲ್ಲದೆ ಹೆಸರು ಕೇಳಿಕೊಂಡಿದೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಗಳು ತಮ್ಮ ಹೆಸರು ಹೇಳುತ್ತಿದ್ದಂತೆಯೇ ದುಷ್ಕರ್ಮಿಗಳು ಯದ್ವಾತದ್ವಾ ಹಲ್ಲೆ ನಡೆಸಿದರಲ್ಲದೆ ಸಮೀರ್ ಎಂಬಾತನ ಮೊಬೈಲ್ ಕಿತ್ತುಕೊಂಡಿದೆ. ಬಳಿಕ ಮೊಬೈಲ್ ಕೊಡಲು ಸತಾಯಿಸಿ, ‘ನಮಗೆ ಇದನ್ನು ಪರಿಶೀಲಿಸಬೇಕಿದೆ. ನಾಳೆ ಕರೆ ಮಾಡಿ’ ಎಂದು ಮೊಬೈಲ್ ಸಂಖ್ಯೆಯೊಂದನ್ನು ನೀಡಿ ಕಿತ್ತುಕೊಂಡ ಮೊಬೈಲ್‌ನೊಂದಿಗೆ ಪರಾರಿಯಾದರು ಎನ್ನಲಾಗಿದೆ. ಘಟನೆಯಿಂದ ಹೆದರಿದ ಈ ವಿದ್ಯಾರ್ಥಿಗಳು ಯಾರಿಗೂ ವಿಷಯ ತಿಳಿಸದೆ ಮನೆಗೆ ಸಾಗಿದ್ದರೂ ಹೊಡೆತದ ನೋವು ಕಾಣಿಸಿಕೊಂಡ ನಂತರ ಮನೆಮಂದಿಯೊಂದಿಗೆ ವಿಷಯ ತಿಳಿಸಿದರು.

ಘಟನೆಯ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಪ್ರತಿಕ್ರಿಯಿಸಿದ ಸಾಬಿತ್, ‘ನಾವು ಐದು ಮಂದಿ ಸಂಜೆ 5 ಗಂಟೆಗೆ ಸುಲ್ತಾನ್ ಬತ್ತೇರಿಯಲ್ಲಿ ಕುಳಿತಿದ್ದಾಗ ಅಲ್ಲೇ ಪಾನಮತ್ತರಾಗಿದ್ದ ಐದಾರು ಮಂದಿ ನಮ್ಮ ಬಳಿ ಬಂದು ನೀವು ಬ್ಯಾರಿಗಳಾ ಎಂದು ಕೇಳಿದರಲ್ಲದೆ, ನಿಮ್ಮನ್ನೆಲ್ಲಾ ನಮಗೆ ಕಂಡರೆ ಆಗದು ಎನ್ನುತ್ತಾ ಬಾಟಲಿ, ರಾಡ್, ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದರು. ಸಮೀರ್‌ನ ಮೊಬೈಲ್ ಕಿತ್ತುಕೊಂಡರಲ್ಲದೆ, ಇದನ್ನು ಪರಿಶೀಲಿಸಬೇಕಾಗಿದೆ. ನಾಳೆ ಕರೆ ಮಾಡಿ’ಎಂದು ಮೊಬೈಲ್ ಸಂಖ್ಯೆಯೊಂದನ್ನು ನೀಡಿ ಪರಾರಿಯಾದರು’ ಎಂದು ತಿಳಿಸಿದ್ದಾರೆ.

ಠಾಣೆಗೆ ಮುತ್ತಿಗೆ: ವಿನಾ ಕಾರಣ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿರುವುದು ಖಂಡನೀಯ. ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗಿದ್ದು, ಪೊಲೀಸ್ ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳ ಬಳಿ ಹಲ್ಲೆಗೊಳಗಾದ ಯುವಕರ ಮೊಬೈಲ್ ಕೂಡ ಇರುವುದರಿಂದ ಅವರ ಗುರುತನ್ನು ಸುಲಭದಲ್ಲಿ ಪತ್ತೆ ಹಚ್ಚಬಹುದು. ಆದಾಗ್ಯೂ ಪೊಲೀಸರು ನಿರ್ಲಕ್ಷಿಸಿದರೆ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಸಿಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಇಮ್ರಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News