ಉಡುಪಿ: ಜೀಪಿನ ಮೇಲಿಟ್ಟ ಎಸೆಸೆಲ್ಸಿ ಪ್ರಶ್ನೆ ಪತ್ರಿಕೆ ಬಂಡಲ್; ಅಧಿಕಾರಿಗೆ ನೋಟಿಸ್

Update: 2018-03-24 16:43 GMT

ಉಡುಪಿ, ಮಾ.24: ಪರೀಕ್ಷಾ ಕೇಂದ್ರದ ಆವರಣದಲ್ಲಿ ಎಸೆಸೆಲ್ಸಿ ಪ್ರಶ್ನೆ ಪತ್ರಿಕೆಯ ಬಂಡಲನ್ನು ಜೀಪಿನ ಮೇಲೆ ಇಟ್ಟು ಪಟ್ಟಾಂಗ ಹೊಡೆಯುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆ ಮಾರ್ಗ ಅಧಿಕಾರಿ ಮಲ್ಲೇಶಪ್ಪ ಎಂಬವರಿಗೆ ನೋಟಿಸ್ ಜಾರಿ ಮಾಡುವುದಾಗಿ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ತಿಳಿಸಿದ್ದಾರೆ.

ಎಸೆಸೆಲ್ಸಿ ಪರೀಕ್ಷೆಯ ಮೊದಲ ದಿನವಾದ ಮಾ. 23ರಂದು ಮಾರ್ಗ ಅಧಿಕಾರಿ ಮಲ್ಲೇಶಪ್ಪ ಕನ್ನಡ ಪ್ರಶ್ನೆ ಪತ್ರಿಕೆಯನ್ನು ಖಜಾನೆಯಿಂದ ಪೊಲೀಸ್ ಭದ್ರತೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಇಲಾಖಾ ಜೀಪಿನಲ್ಲಿ ಕೊಂಡೊಯ್ದಿದ್ದು, ವಳಕಾಡು ಶಾಲೆಯ ಪರೀಕ್ಷಾ ಕೇಂದ್ರದ ಆವರಣದಲ್ಲಿ ಅವರು ಜೀಪನ್ನು ನಿಲ್ಲಿಸಿ ಅದರ ಬೊನೆಟ್ ಮೇಲೆ ಪ್ರಶ್ನೆ ಪತ್ರಿಕೆಯ ಬಂಡಲ್‌ನ್ನು ಇಟ್ಟು ಇತರರೊಂದಿಗೆ ಪಟ್ಟಾಂಗ ನಡೆಸುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದವು. ಆ ಕುರಿತು ಫೋಟೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ವಳಕಾಡು ಪರೀಕ್ಷಾ ಕೇಂದ್ರದ ಬಾಗಿಲಿನವರೆಗೆ ಪ್ರಶ್ನೆ ಪತ್ರಿಕೆ ತುಂಬಿದ ಇಲಾಖಾ ಜೀಪು ಹೋಗಲು ಆಗದ ಕಾರಣ, ಮಲ್ಲೇಶಪ್ಪ ಜೀಪನ್ನು ಆವರಣ ದೊಳಗೆ ನಿಲ್ಲಿಸಿ ಕೇಂದ್ರದ ಮುಖ್ಯಸ್ಥರನ್ನು ಕರೆಯಲು ಹೋಗಿದ್ದಾಗ ಪ್ರಶ್ನೆ ಪತ್ರಿಕೆಯ ಬಂಡಲನ್ನು ಜೀಪಿನ ಬೊನೆಟ್ ಮೇಲೆ ಇಟ್ಟಿದ್ದರು. ಜೀಪಿನಲ್ಲಿ ನಾಲ್ಕೈದು ಕೇಂದ್ರಗಳ ಪ್ರಶ್ನೆ ಪತ್ರಿಕೆ ಇರುವುದರಿಂದ ಅವರಿಗೆ ಜೀಪನ್ನು ಬಿಟ್ಟು ಹೋಗಲು ಆಗುವುದಿಲ್ಲ. ಅದಕ್ಕಾಗಿ ಅವರು ಮುಖ್ಯಸ್ಥರನ್ನೇ ಜೀಪು ಇರುವಲ್ಲಿಗೆ ಕರೆದಿದ್ದಾರೆ. ಆಗ ಭದ್ರತಾ ಸಿಬ್ಬಂದಿಗಳು ಜೀಪಿನ ಬಳಿ ಇದ್ದರು ಎಂಬುದು ತಿಳಿದುಬಂದಿದೆ. ಈಗ ಆ ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಆ ಹಿನ್ನೆಲೆಯಲ್ಲಿ ಮಲ್ಲೇಶಪ್ಪಗೆ ನೋಟಿಸ್ ಜಾರಿ ಮಾಡಿ ವಿವರ ಪಡೆದುಕೊಳ್ಳಲಾಗುವುದು’ ಎಂದು ಶೇಷಶಯನ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News