ನಿಕೊಲ್ಸ್ ಶತಕ: ನ್ಯೂಝಿಲೆಂಡ್ 427

Update: 2018-03-25 18:24 GMT

ಆಕ್ಲೆಂಡ್, ಮಾ.25: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹೆನ್ರಿ ನಿಕೊಲ್ಸ್(ಔಟಾಗದೆ 145)ಆಕರ್ಷಕ ಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧದ ಹಗಲು-ರಾತ್ರಿ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 427 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ.

 ಎರಡನೇ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ನಾಲ್ಕನೇ ದಿನವಾದ ರವಿವಾರ ಆಟ ಕೊನೆಗೊಂಡಾಗ 3 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದೆ. ಮೊದಲ ಟೆಸ್ಟ್ ಡ್ರಾಗೊಳಿಸಬೇಕಾದರೆ ಅಂತಿಮ ದಿನವಾದ ಸೋಮವಾರ ಇನ್ನೂ 237 ರನ್ ಗಳಿಸಬೇಕಾಗಿದೆ. 38ನೇ ಅರ್ಧಶತಕ ಸಿಡಿಸಿದ ಜೋ ರೂಟ್ ದಿನದಾಟದಂತ್ಯಕ್ಕೆ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು. ಅಲಿಸ್ಟರ್ ಕುಕ್(2) ಬೇಗನೆ ಔಟಾದಾಗ ರೂಟ್ ಅವರೊಂದಿಗೆ 2ನೇ ವಿಕೆಟ್‌ಗೆ 88 ರನ್ ಜೊತೆಯಾಟ ನಡೆಸಿದ ಮಾರ್ಕ್ ಸ್ಟೋನ್‌ಮನ್ 91 ಎಸೆತಗಳಲ್ಲಿ 55 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಬೌಲ್ಟ್ 24 ರನ್‌ಗೆ 2 ವಿಕೆಟ್ ಪಡೆದರು.

  4 ವಿಕೆಟ್‌ಗಳ ನಷ್ಟಕ್ಕೆ 233 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ನ್ಯೂಝಿಲೆಂಡ್‌ಗೆ 2ನೇ ಶತಕ ಸಿಡಿಸಿದ ನಿಕೊಲ್ಸ್ ಆಸರೆಯಾದರು. ಕಿವೀಸ್ ರವಿವಾರ ನಾಲ್ಕು ವಿಕೆಟ್‌ಗಳಲ್ಲಿ 194 ರನ್ ಸೇರಿಸಿತು. ವಾಟ್ಲಿಂಗ್ 31 ರನ್ ಗಳಿಸಿ ಬ್ರಾಡ್‌ಗೆ ವಿಕೆಟ್ ಒಪ್ಪಿಸಿದರು.

ಕೆಳ ಕ್ರಮಾಂಕದಲ್ಲಿ ಗ್ರಾಂಡ್‌ಹೊಮ್(29) ಹಾಗೂ ಟಿಮ್ ಸೌಥಿ(25) ಉತ್ತಮ ಕೊಡುಗೆ ನೀಡಿ ತಂಡದ ಸ್ಕೋರನ್ನು 400ರ ಗಡಿ ದಾಟಿಸಿದರು. ಇಂಗ್ಲೆಂಡ್‌ನ ಪರ ಬ್ರಾಡ್ (3-78) ಹಾಗೂ ಆ್ಯಂಡರ್ಸನ್(3-87)ತಲಾ 3 ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್

►ಇಂಗ್ಲೆಂಡ್ ಮೊದಲ ಇನಿಂಗ್ಸ್: 58/10

►ನ್ಯೂಝಿಲೆಂಡ್ ಮೊದಲ ಇನಿಂಗ್ಸ್: 427/8 ಡಿಕ್ಲೇರ್

(ನಿಕೊಲ್ಸ್ ಔಟಾಗದೆ 145, ವಿಲಿಯಮ್ಸನ್ 102, ಆ್ಯಂಡರ್ಸನ್ 3-78, ಬ್ರಾಡ್ 3-87)

►ಇಂಗ್ಲೆಂಡ್ ಎರಡನೇ ಇನಿಂಗ್ಸ್:132/3

(ಸ್ಟೋನ್‌ಮನ್ 55, ರೂಟ್ 51, ಬೌಲ್ಟ್ 2-24)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News