ವಿಶ್ವದ ಅತ್ಯಂತ ದುಬಾರಿ ಸ್ಪೋರ್ಟ್ಸ್ ಯುಟಿಲಿಟಿ ವಾಹನ ‘ಕಾರ್ಲಮನ್ ಕಿಂಗ್’ ಬಗ್ಗೆ ನಿಮಗೆಷ್ಟು ಗೊತ್ತಿದೆ....?
ಕಳೆದ ವರ್ಷ ದುಬೈ ಇಂಟರ್‌ನ್ಯಾಷನಲ್ ಮೋಟರ್ ಶೋದಲ್ಲಿ ಅನಾವರಣಗೊಂಡ ‘ಕಾರ್ಲಮನ್ ಕಿಂಗ್’ ವಿಶ್ವದ ಅತ್ಯಂತ ದುಬಾರಿ ಸ್ಪೋರ್ಟ್ಸ್ ಯುಟಿಲಿಟಿ ವಾಹನ (ಎಸ್‌ಯುವಿ)ವಾಗಿದ್ದು, ಅದರ ಬೆಲೆ 2.2 ಮಿಲಿಯನ್ ಡಾಲರ್(ತೆರಿಗೆಗಳು ಮತ್ತು ಸುಂಕಗಳನ್ನು ಹೊರತುಪಡಿಸಿ) ಗಳಿಂದ ಆರಂಭಗೊಳ್ಳುತ್ತದೆ. ಅಂದರೆ ನಮ್ಮ ಲೆಕ್ಕದಲ್ಲಿ ಸುಮಾರು 14.27 ಕೋ.ರೂ.ಗಳು! ಭಾರತಕ್ಕೆ ಆಮದು ಮಾಡಿಕೊಂಡರೆ ಈ ಬೆಲೆ ದುಪ್ಪಟ್ಟಾಗಬಹುದು!!
ಕೇವಲ 12 ವಾಹನಗಳು
ಕಂಪನಿಯು ವಾಹನದ ವೈಶಿಷ್ಟವನ್ನು ಕಾಯ್ದುಕೊಳ್ಳಲು ಕೇವಲ 12 ಕಾರ್ಲಮನ್ ಕಿಂಗ್ ಎಸ್‌ಯುವಿಗಳನ್ನು ತಯಾರಿಸಲಿದೆ. ಅಂದರೆ ವಿಶ್ವದ 12 ಬಿಲಿಯಾಧಿಪತಿಗಳು ಮಾತ್ರ ಈ ಕಾರಿನ ಮಾಲಿಕರಾಗುವ ಭಾಗ್ಯವಂತರಾಗಲಿದ್ದಾರೆ.
ಕೆತ್ತನೆ ಕೆಲಸದ ನೋಟ
ಚೀನಾದ ವಾಹನ ತಯಾರಿಕೆ ಸಂಸ್ಥೆ ಐಎಟಿ ಆಟೊಮೊಬೈಲ್ ಟೆಕ್ನಾಲಜಿಯು ವಿನ್ಯಾಸಗೊಳಿಸಿರುವ ಕಾರ್ಲ್‌ಮನ್ ಕಿಂಗ್ ಅನ್ನು ಯುರೋಪ್‌ನಲ್ಲಿ 1,800 ತಂತ್ರಜ್ಞರನ್ನೊಳಗೊಂಡಿರುವ ತಂಡವು ತಯಾರಿಸುತ್ತಿದೆ. ಕಾರಿನ ಹೊರಭಾಗವು ಕೆತ್ತನೆ ಕೆಲಸದ ನೋಟವನ್ನು ಹೊಂದಿದ್ದು, ಗುಂಡು ನಿರೋಧಕ ಕಾರಿನಂತೆ ಕಾಣಿಸುತ್ತದೆ. ಗ್ರಾಹಕರು ಬಯಸಿದರೆ ಕಂಪನಿಯು ಈ ಕಾರಿಗೆ ಗುಂಡು ನಿರೋಧಕ ಕವಚವನ್ನೂ ಅಳವಡಿಸಲಿದೆ ಮತ್ತು ಕಾರಿನ ಬೆಲೆ 3.5 ಮಿಲಿಯನ್ ಡಾಲರ್(22.7 ಕೋ.ರೂ.) ಗೇರಲಿದೆ.
ಶಕ್ತಿ ಮತ್ತು ಕಾರ್ಯ ನಿರ್ವಹಣೆ
ಫೋರ್ಡ್-550ರ ಪ್ಲಾಟ್‌ಫಾರ್ಮ್‌ನ್ನು ಆಧರಿಸಿರುವ ಕಾರ್ಲಮನ್ ಕಿಂಗ್ ಸುಮಾರು 4.5 ಟನ್ ತೂಗುತ್ತದೆ. ಗ್ರಾಹಕರು ಬಯಸಿದರೆ ಗುಂಡು ನಿರೋಧಕ ಕವಚವನ್ನು ಅಳವಡಿಸಿದರೆ ತೂಕ ಆರು ಟನ್‌ಗಳವರೆಗೆ ತಲುಪಲಿದೆ. ಆರು ಮೀಟರ್ ಉದ್ದ ಮತ್ತು 8.2 ಅಡಿ ಅಗಲವಿರುವ ಈ ಕಾರು ಫೋರ್ಡ್‌ನ ಬೃಹತ್ 6.8 ಲೀಟರ್ ವಿ10 ಇಂಜಿನ್ ಹೊಂದಿದೆ. ಆದರೆ ಕಾರಿನ ಭಾರೀ ತೂಕವು ಅದರ ವೇಗವನ್ನು ಪ್ರತಿಗಂಟೆಗೆ ಕೇವಲ 140 ಕಿ.ಮೀ.ಗೆ ಸೀಮಿತಗೊಳಿಸಿದೆ.
ಒಳಗೇನಿದೆ?
ಕಾರ್ಲ್‌ಮನ್ ಕಿಂಗ್‌ನ ಒಳಭಾಗವು ರೋಲ್ಸ್‌ರಾಯ್ಸ್ ದರ್ಜೆಯ ವೈಭವವನ್ನು ಹೊಂದಿದೆ. ಅತ್ಯುತ್ತಮ ವಸ್ತುಗಳಿಂದ ತಯಾರಾದ ಅಪ್‌ಹೋಲ್‌ಸ್ಟ್ರಿ, ಹೈ-ಫೈ ಸೌಂಡ್, ಅಲ್ಟ್ರಾ ಎಚ್‌ಡಿ 4ಕೆ ಟಿವಿ ಸೆಟ್, ಖಾಸಗಿ ಸೇಫ್‌ಬಾಕ್ಸ್ ಮತ್ತು ಫೋನ್ ಪ್ರೊಜೆಕ್ಷನ್ ಸಿಸ್ಟಂ ಇವೆಲ್ಲವೂ ಈ ಕಾರಿನೊಳಗೆ ಇವೆ. ಬಿಲ್ಟ್ ಇನ್ ಫ್ರಿಝ್, ಕಾಫಿ ಮಷಿನ್, ಇಲೆಕ್ಟ್ರಿಕ್ ಟೇಬಲ್, ಸ್ವತಂತ್ರ ಹವಾ ನಿಯತ್ರಣ ವ್ಯವಸ್ಥೆ, ಇಂಡೋರ್ ನಿಯಾನ್ ಲೈಟ್ ಕಂಟ್ರೋಲ್ ಜೊತೆಗೆ ಸೆಟಲೈಟ್ ಟಿವಿ, ಸೆಟಲೈಟ್ ಫೋನ್ ಅನ್ನು ಅಳವಡಿಸುವ ಆಯ್ಕೆಯೂ ಗ್ರಾಹಕರಿಗಿದೆ.