ಉತ್ತರ ಪ್ರದೇಶ: ಆ್ಯಂಬುಲೆನ್ಸ್ ನಿರಾಕರಣೆ; ತಂದೆಯ ಶವವನ್ನು ಸೈಕಲ್ ಗಾಡಿಯಲ್ಲಿ ಕೊಂಡೊಯ್ದ ವಿಶೇಷಚೇತನ

Update: 2018-03-27 16:36 GMT

ಲಕ್ನೋ, ಮಾ. 27: ಆಸ್ಪತ್ರೆ ಆ್ಯಂಬುಲೆನ್ಸ್ ನಿರಾಕರಿಸಿದ ಹಿನ್ನೆಲೆಯಲ್ಲಿ ವಿಶೇಷಚೇತನನೋರ್ವ ತನ್ನ ತಂದೆಯ ಮೃತದೇಹವನ್ನು 8 ಕಿ.ಮೀ. ದೂರದಲ್ಲಿದ್ದ ತನ್ನ ಮನೆಗೆ ಸೈಕಲ್ ಗಾಡಿಯಲ್ಲಿ ಕೊಂಡೊಯ್ದ ಹೃದಯ ವಿದ್ರಾವಕ ಘಟನೆ ಬಾರಾಬಂಕಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ವಿಶೇಷಚೇತನ ಯುವಕ ರಾಜ್‌ಕುಮಾರ್ ಸೈಕಲ್ ಗಾಡಿ ತುಳಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಎಳೆದುಕೊಂಡು ಹೋಗಿದ್ದಾರೆ. ಇದಕ್ಕೆ ಆತನ 10 ವರ್ಷದ ಸಹೋದರಿ ಗಾಡಿಯನ್ನು ತಳ್ಳಿ ನೆರವು ನೀಡಿದ್ದಾಳೆ. ಜಿಲ್ಲೆಯ ಲೋನಿ ಕಾಟ್ರಾ ಗ್ರಾಮದ ಮನ್ಸಾ ರಾಮ್ (50) ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಗ್ರಾಮದ ಕೆಲವರು ಸೋಮವಾರ ಅವರನ್ನು ಚಿಕಿತ್ಸೆಗಾಗಿ ತ್ರಿವೇದಿಗಂಜ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದರು. ತೀವ್ರ ಅಸ್ವಸ್ಥಗೊಂಡ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ತಂದೆ ಶವ ಕೊಂಡೊಯ್ಯಲು ಆ್ಯಂಬುಲೆನ್ಸ್ ನೀಡುವಂತೆ ರಾಜ್‌ಕುಮಾರ್ ಆಸ್ಪತ್ರೆಯವರಲ್ಲಿ ವಿನಂತಿಸಿದ್ದರು. ಆದರೆ, ಆ್ಯಂಬುಲೆನ್ಸ್ ನೀಡಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯವರು ಹೇಳಿದ್ದರು. ಕೆಲವು ಗಂಟೆ ಕಾದ ಬಳಿಕ ರಾಜ್‌ಕುಮಾರ್ ಹಾಗೂ ಅವರ ಸಹೋದರಿ ತಂದೆಯ ಶವವನ್ನು ಸೈಕಲ್ ಗಾಡಿಯಲ್ಲಿ ಗ್ರಾಮಕ್ಕೆ ಕೊಂಡೊಯ್ಯಲು ನಿರ್ಧರಿಸಿದರು.

  ‘‘ಈ ಸಂದರ್ಭ ನಾನು ಸಭೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ತೆರಳಿದ್ದೆ. ನಾನಿರಲಿಲ್ಲ.’’ ಎಂದು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಕೀಯ ಅಧೀಕ್ಷಕ ಮುಕುಂದ್ ಪಟೇಲ್ ಸಮಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News