ಸಹೋದ್ಯೋಗಿಗಳ ಮೇಲೆ ಹಲ್ಲೆ: ಎಫ್‌ಐಆರ್ ದಾಖಲಿಸಲು ಆಗ್ರಹಿಸಿ ಗೃಹಸಚಿವರಿಗೆ ಪತ್ರಕರ್ತರ ಪತ್ರ

Update: 2018-03-27 15:43 GMT

 ಹೊಸದಿಲ್ಲಿ,ಮಾ.27:ದಿಲ್ಲಿಯ ಪತ್ರಕರ್ತರ ಸಂಘಗಳು ಗೃಹಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದು, ಇಲ್ಲಿ ಪ್ರತಿಭಟನೆಯೊಂದರ ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆ ಹಲ್ಲೆ ಮತ್ತು ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿವೆ.

ಮಾ.22ರಂದು ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದ ಘಟನೆಯನ್ನು ಈ ಸಂಘಗಳು ಸಿಂಗ್ ಅವರ ಗಮನಕ್ಕೆ ತಂದಿವೆ.

 ಇಬ್ಬರು ಪತ್ರಕರ್ತೆಯರ ಮೇಲೆ ಹಲ್ಲೆಗಳು ನಡೆದಿದ್ದವು. ಅವರ ಪೈಕಿ ಓರ್ವರಿಗೆ ಮಹಿಳಾ ಪೊಲೀಸರು ಬೆದರಿಕೆಯೊಡ್ಡಿದ್ದರೆ, ಇನ್ನೋರ್ವರಿಗೆ ಠಾಣಾಧಿಕಾರಿ ವಿದ್ಯಾಧರ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದರು. ಪೊಲೀಸರ ಹೊಡೆತದಿಂದ ಪತ್ರಕರ್ತರೋರ್ವರ ಕೈಮೂಳೆಯು ಮುರಿದಿತ್ತು.

ಸಂತ್ರಸ್ತ ಪತ್ರಕರ್ತರು ಸಲ್ಲಿಸಿರುವ ದೂರುಗಳ ಆಧಾರದಲ್ಲಿ ಎಫ್‌ಐಆರ್ ದಾಖಲಿಸಬೇಕು ಮತ್ತು ಪತ್ರಕರ್ತರ ಮೇಲೆ ಹಲ್ಲೆ ಹಾಗೂ ಕಿರುಕುಳದಲ್ಲಿ ಭಾಗಿಯಾಗಿರುವ ಪೊಲೀಸರು ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಹಾಗು ಕಾಲ ನಿಗದಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪತ್ರಕರ್ತರ ಸಂಘಗಳು ಒತ್ತಾಯಿಸಿವೆ.

ಪತ್ರಕರ್ತರನ್ನು ಗುರಿಯಾಗಿಸಿಕೊಳ್ಳುವಂತೆ ನಿರ್ದೇಶ ನೀಡಿದ್ದ ಹಿರಿಯ ಅಧಿಕಾರಿಗಳಿಂದಲೂ ಉತ್ತರದಾಯಿತ್ವವನ್ನು ನಾವು ಆಗ್ರಹಿಸುತ್ತಿದ್ದೇವೆ. ಲೈಂಗಿಕ ಕಿರುಕುಳದ ಗಂಭೀರ ಆರೋಪ ವನ್ನು ಹೊತ್ತಿರುವ ಠಾಣಾಧಿಕಾರಿಯನ್ನು ತಕ್ಷಣವೇ ಅಮಾನತು ಗೊಳಿಸಬೇಕು ಮತ್ತು ನಿಷ್ಪಕ್ಷಪಾತ ತನಿಖೆಯನ್ನು ನಡೆಸಬೇಕು ಎಂದೂ ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News