ಬ್ಯಾಂಕುಗಳಿಗೆ ಪಂಗನಾಮ ಹಾಕಿದ ಮಲ್ಯಗೆ ಲಂಡನ್ ನಲ್ಲಿ ಕಂಕಣ ಭಾಗ್ಯ !
ಲಂಡನ್ , ಮಾ. 28 : ಭಾರತೀಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿದ ಆರೋಪ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ಲಂಡನ್ ನಲ್ಲಿ ಭಾರೀ ಸಂಕಟದಲ್ಲಿದ್ದಾರೆ ಎಂದು ನೀವಂದುಕೊಂಡರೆ ಪರಿಸ್ಥಿತಿ ಹಾಗಿಲ್ಲ.
ದೇಶದಿಂದ ಪರಾರಿಯಾಗಿ ಲಂಡನ್ ನಲ್ಲಿ ತಲೆಮರೆಸಿಕೊಂಡ ವ್ಯಕ್ತಿ ಎಂಬ ಹಣೆಪಟ್ಟಿ ಹೊತ್ತಿರುವ ಮಲ್ಯ ಸದ್ಯಕ್ಕೆ ತಲೆಕೆಡಿಸಿಕೊಂಡಿರುವುದು ಸಾಲ ಪಾವತಿಸುವ ಬಗ್ಗೆಯಲ್ಲ ಎಂಬುದು ಮಾಧ್ಯಮಗಳ ವರದಿ. ಅವುಗಳ ಪ್ರಕಾರ ಮಲ್ಯ ಶೀಘ್ರ ಮೂರನೇ ಮದುವೆಯಾಗುವ ಸಿದ್ಧತೆಯಲ್ಲಿದ್ದಾರೆ !
ಮಾಜಿ ಗಗನಸಖಿ ಹಾಗು ತಮ್ಮ ಹಾಲಿ ಗೆಳತಿ ಪಿಂಕಿ ಲಾಲ್ವಾನಿ ಅವರನ್ನು ವಿಜಯ್ ಮಲ್ಯ ವಿವಾಹವಾಗಲಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. 2011 ರಲ್ಲಿ ಪರಸ್ಪರ ಪ್ರೀತಿಸಲು ಪ್ರಾರಂಭಿಸಿದ ಮಲ್ಯ ಹಾಗು ಲಾಲ್ವಾನಿ ಮಾರ್ಚ್ ಮಧ್ಯ ಭಾಗದಲ್ಲಿ ಅಲ್ಲಲ್ಲಿ ಒಟ್ಟಿಗೆ ಕಾಣಿಸಿಕೊಳ್ಳತೊಡಗಿದ್ದರು. ಈಗ ಮುಚ್ಚಿರುವ ತಮ್ಮ ವಿಮಾನ ಸಂಸ್ಥೆ ಕಿಂಗ್ ಫಿಷರ್ ನಲ್ಲಿ ಗಗನಸಖಿಯಾಗಿ ಉದ್ಯೋಗ ನೀಡಿದ ಬಳಿಕ ಮಲ್ಯ ಹಾಗು ಲಾಲ್ವಾನಿ ಮಧ್ಯೆ ಪ್ರೀತಿ ಚಿಗುರಿತ್ತು ಎಂದು ಹೇಳಲಾಗಿದೆ.
ಲಂಡನ್ ನಲ್ಲೂ ಲಾಲ್ವಾನಿ ಮಲ್ಯ ಜೊತೆಗೆ ಕಾಣಿಸಿಕೊಳ್ಳುತ್ತಿದ್ದು ಮಲ್ಯ ಕೋರ್ಟಿಗೆ ಹಾಜರಾಗುವಾಗಲೂ ಲಾಲ್ವಾನಿ ಅವರ ಜೊತೆ ಇರುತ್ತಾರೆ ಎಂದು ಹೇಳಲಾಗಿದೆ. ಮಲ್ಯ ಈ ಹಿಂದೆ ಸಮೀರಾ ತ್ಯಾಬ್ಜಿ ಅವರನ್ನು 1986 ರಲ್ಲಿ ವಿವಾಹವಾಗಿ 1987 ರಲ್ಲಿ ವಿಚ್ಛೇದನ ನೀಡಿದ್ದರು.
1993 ರಲ್ಲಿ ಮಲ್ಯ ವಿವಾಹವಾಗಿರುವ ರೇಖಾ ಮಲ್ಯ ಈಗಲೂ ಅವರ ಪತ್ನಿ. ಅವರ ಈ ಹಿಂದಿನ ಎರಡು ಮದುವೆಗಳಿಂದ ಅವರಿಗೆ ಮೂವರು ( ಸಿದ್ಧಾರ್ಥ್ , ಲಿಯಾನಾ ಹಾಗು ತಾನ್ಯಾ) ಮಕ್ಕಳಿದ್ದಾರೆ.