ರಾಜ್ಯದಲ್ಲಿ ಮೀಸಲಾತಿ ಕೊನೆಗೊಳಿಸುವ ಪಿತೂರಿ ನಡೆಯುತ್ತಿದೆ: ಉ.ಪ್ರದೇಶ ಬಿಜೆಪಿ ಸಂಸದೆ ಆರೋಪ

Update: 2018-03-28 16:16 GMT
ಸಾವಿತ್ರಿ ಬಾಯಿ ಫುಲೆ

ಲಕ್ನೊ, ಮಾ.28: ರಾಜ್ಯದಲ್ಲಿ ಮೀಸಲಾತಿಯನ್ನು ಕೊನೆಗೊಳಿಸುವ ಹುನ್ನಾರ ನಡೆಯುತ್ತಿದೆ. ಆದರೆ ಸರಕಾರ ಮಾತ್ರ ಈ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳದೆ ಮೂಕಪ್ರೇಕ್ಷಕನಾಗಿ ಕುಳಿತಿದೆ ಎಂದು ತನ್ನದೇ ಪಕ್ಷದ ವಿರುದ್ಧ ಸಮರ ಸಾರಿರುವ ಉತ್ತರ ಪ್ರದೇಶದ ಬಹ್ರೈಚ್‌ನ ಸಂಸದೆ ಸಾವಿತ್ರಿ ಬಾಯಿ ಫುಲೆ ಆರೋಪಿಸಿದ್ದಾರೆ. ಪಕ್ಷದಲ್ಲಿ ಎದ್ದಿರುವ ಮೀಸಲಾತಿ ವಿರೋಧಿ ಧ್ವನಿಗಳ ವಿರುದ್ಧ ಎಪ್ರಿಲ್ ಒಂದರಂದು ಲಕ್ನೊದಲ್ಲಿ ಧರಣಿ ನಡೆಸುವುದಾಗಿ ಆಕೆ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ, ಸಂವಿಧಾನ ಮತ್ತು ಮೀಸಲಾತಿಯನ್ನು ಪುನರ್‌ಪರಿಶೀಲಿಸುವ ಕುರಿತು ನಿರಂತರ ಸಮಾಲೋಚನೆ ನಡೆಯುತ್ತಲೇ ಇದೆ. ಇದು ಮೀಸಲಾತಿಯನ್ನು ಕೊನೆಗೊಳಿಸುವ ಪ್ರಯತ್ನವಾಗಿದೆ. ಕಳೆದ ವರ್ಷ ನಾನು ಬಹ್ರೈಚ್‌ನ ನನ್ಪರದಲ್ಲಿ ಈ ಬೆಳವಣಿಗೆಯನ್ನು ವಿರೋಧಿಸಿ ರ್ಯಾಲಿ ನಡೆಸಿದ್ದೆ, ಈಗ ಮತ್ತೊಮ್ಮೆ ಲಕ್ನೊದ ಕಾನ್ಶಿರಾಮ್ ಸ್ಮೃತಿ ಉದ್ಯಾನವದಲ್ಲಿ ಮೀಸಲಾತಿ ಉಳಿಸಿ ರ್ಯಾಲಿ ನಡೆಸುವುದಾಗಿ ಫುಲೆ ತಿಳಿಸಿದ್ದಾರೆ. ನಾನು ಹಿಂದುಳಿದ ವರ್ಗಗಳ ಏಳಿಗೆಗಾಗಿ ಯಾವ ಸಮಸ್ಯೆಯನ್ನು ಎದುರಿಸಲೂ ಸಿದ್ಧ. ಮೀಸಲಾತಿಯನ್ನು ತೆಗೆದುಹಾಕಿದರೆ ದೇಶದ ಹಿಂದುಳಿದ ಸಮುದಾಯ ಸಮಾಜದಲ್ಲಿ ತಮಗೆ ಸಿಗಬೇಕಾದ ಪ್ರಾತಿನಿಧ್ಯವನ್ನು ಪಡೆಯುವಲ್ಲಿ ವಿಫಲವಾಗಲಿದೆ. ಸರಕಾರ ಈ ಬಗ್ಗೆ ಚಿಂತಿಸಿರುವಂತೆ ಕಾಣುತ್ತಿಲ್ಲ ಎಂದು ಫುಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಉ.ಪ್ರದೇಶದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಸುಹೆಲ್‌ದೇವ್ ಪಕ್ಷದ ಮುಖ್ಯಸ್ಥ ಮತ್ತು ಸಚಿವ ಓಂ ಪ್ರಕಾಶ್ ರಾಜ್ಬರ್ ಕೂಡಾ ಆದಿತ್ಯನಾಥ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದಿತ್ಯನಾಥ್ ಹಿಂದುಳಿದ ಸಮುದಾಯದ ನಾಯಕರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News