ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆ ತಿದ್ದುಪಡಿ ಆದೇಶ: ಪ್ರಧಾನಿ ಮೋದಿಯನ್ನು ಭೇಟಿಯಾದ ಸಂಸದರು

Update: 2018-03-28 16:48 GMT
ರಾಮ್ ವಿಲಾಸ್ ಪಾಸ್ವಾನ್

ಹೊಸದಿಲ್ಲಿ, ಮಾ.28: ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಎನ್‌ಡಿಎಯ ಎಸ್ಸಿ/ಎಸ್ಟಿ ಸಂಸದರು ಲೋಕ ಜನಶಕ್ತಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಸಚಿವ ತಾವರ್‌ಚಂದ್ ಗೆಹ್ಲೊಟ್ ನೇತೃತ್ವದಲ್ಲಿ ಬುಧವಾರದಂದು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಪ್ರಧಾನಿ ಮೋದಿಯವರ ಜೊತೆ ಶ್ರೇಷ್ಠ ನ್ಯಾಯಾಲಯವು ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆಯ ಕುರಿತು ನೀಡಿರುವ ಆದೇಶದ ಬಗ್ಗೆ ಚರ್ಚೆ ನಡೆಸಿದ್ದೇವೆ. ಪ್ರಧಾನಿಯವರು ನಮ್ಮ ಮಾತುಗಳನ್ನು ಆಲಿಸಿದರು ಮತ್ತು ನಮ್ಮ ಆತಂಕವನ್ನು ಅರಿತುಕೊಂಡರು ಎಂದು ಪಾಸ್ವಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪಿಯನ್ನು ತಕ್ಷಣ ಬಂಧಿಸುವ ನಿಬಂಧನೆಯನ್ನು ಸರ್ವೋಚ್ಚ ನ್ಯಾಯಾಲಯ ಮಾಚ್ 20ರಂದು ನೀಡಿದ ಆದೇಶದಲ್ಲಿ ತೆಗೆದು ಹಾಕಿತ್ತು. ಅದಕ್ಕಾಗಿ ಸರಕಾರಿ ಅಧಿಕಾರಿಗಳ ವಿರುದ್ಧ ಈ ಕಾಯ್ದೆಯನ್ನು ಅವ್ಯಾಹತವಾಗಿ ದುರುಪಯೋಗಪಡಿಸಿಕೊಳ್ಳುವುದನ್ನು ಉಲ್ಲೇಖಿಸಿದ ಘನ ನ್ಯಾಯಾಲಯ, ಮೇಲಧಿಕಾರಿಗಳು ಅನುಮತಿ ನೀಡಿದ ನಂತರವೇ ಆರೋಪಿಯನ್ನು ಬಂಧಿಸಬೇಕೆಂದು ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News