ಸಿಜೆಐ ದೀಪಕ್ ಮಿಶ್ರಾ ವಿರುದ್ಧ ದೋಷಾರೋಪ ನಿರ್ಣಯಕ್ಕೆ ವಿಪಕ್ಷಗಳಿಂದ ಸಹಿ

Update: 2018-03-28 16:32 GMT

ಹೊಸದಿಲ್ಲಿ, ಮಾ.28: ಹಲವು ವಿರೋಧಪಕ್ಷಗಳ ಬೆಂಬಲದೊಂದಿಗೆ ಕಾಂಗ್ರೆಸ್, ಭಾರತದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ವಿರುದ್ಧ ಸಂಸತ್‌ನಲ್ಲಿ ದೋಷಾರೋಪ ನಿರ್ಣಯ ಮಂಡಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ. ಮುಖ್ಯ ನ್ಯಾಯಾಧೀಶರನ್ನು ವಜಾಗೊಳಿಸಲು ವಿರೋಧ ಪಕ್ಷಗಳು ಅರ್ಜಿಯೊಂದಕ್ಕೆ ಸಹಿ ಸಂಗ್ರಹಿಸುತ್ತಿರುವುದಾಗಿ ಎನ್ಸಿಪಿ ನಾಯಕರು ದೃಢಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ಈ ಬಗ್ಗೆ ಹೇಳಿಕೆ ನೀಡುವ ಎನ್ಸಿಪಿಯ ಮಜೀದ್ ಮೆಮನ್, ಈಗಾಗಲೇ ಈ ಅರ್ಜಿಗೆ 20 ಸದಸ್ಯರು ಸಹಿ ಹಾಕಿದ್ದಾರೆ. ಈ ಪೈಕಿ ಕಾಂಗ್ರೆಸ್‌ನ ಗುಲಾಮ್ ನಬಿ ಆಝಾದ್, ಕಪಿಲ್ ಸಿಬಲ್ ಮತ್ತು ಅಹ್ಮದ್ ಪಟೇಲ್ ಸೇರಿದ್ದಾರೆ ಹಾಗೂ ಐವರು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಸದಸ್ಯರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಜನವರಿ 11ರಂದು ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಾಧೀಶರು ಮುಖ್ಯ ನ್ಯಾಯಾಧೀಶರ ವಿರುದ್ಧ ಬಂಡಾಯವೆದ್ದು ಮಾಧ್ಯಮಗೋಷ್ಟಿ ನಡೆಸಿ ತಮ್ಮ ಅಸಮಾಧಾನ ತೋಡಿಕೊಂಡಿದ್ದರು.

ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ, ಪ್ರಕರಣಗಳನ್ನು ಹಂಚುವಾಗ ಪಕ್ಷಪಾತ ಮಾಡುತ್ತಿದ್ದಾರೆ. ಪ್ರಮುಖ ಪ್ರಕರಣಗಳನ್ನು ಅವರು ಕಿರಿಯ ವಕೀಲರ ಪೀಠಕ್ಕೆ ನೀಡುತ್ತಿದ್ದಾರೆ. ದೇಶದಲ್ಲಿ ನ್ಯಾಯಾಂಗವು ಅಪಾಯದಲ್ಲಿದೆ ಎಂದು ಅವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸದ್ಯ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ಸಿಜೆಐ ವಿರುದ್ಧ ದೋಷಾರೋಪ ನಿರ್ಣಯ ಮಂಡಿಸಲು ಮುಂದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಭಾರತದ ಮುಖ್ಯ ನ್ಯಾಯಾಧೀಶರ ವಿರುದ್ಧ ದೋಷಾರೋಪ ನಿರ್ಣಯ ಮಂಡಿಸಲು ಲೋಕಸಭೆಯಲ್ಲಿ ಕನಿಷ್ಟ 100 ಸಂಸದರ ಸಹಿಯ ಅಗತ್ಯವಿದ್ದರೆ ರಾಜ್ಯಸಭೆಯಲ್ಲಿ 50 ಸದಸ್ಯರ ಸಹಿ ಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News