ಹಾಸನದಿಂದ ಕೇರಳಕ್ಕೆ ತೆರಳುತ್ತಿದ್ದ ಸ್ಫೋಟಕ ತುಂಬಿದ ಲಾರಿ ವಶ
ಮಲಪ್ಪುರಂ, ಮಾ. 28: ಮಲಪ್ಪುರಂ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಡಿಟೋನೇಟರ್, ಜಿಲೆಟಿನ್ ಕಡ್ಡಿ ಹಾಗೂ ಫ್ಯೂಸ್ ವಯರ್ ಸೇರಿದಂತೆ ಸ್ಫೋಟಕಗಳ ಸರಕು ಹೊಂದಿದ್ದ ಲಾರಿಯೊಂದನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸ್ಫೋಟಕ ತುಂಬಿದ ಈ ಲಾರಿ ಕರ್ನಾಟಕದ ಹಾಸನದಿಂದ ಕೋಝಿಕ್ಕೋಡ್‌ಗೆ ತೆರಳುತ್ತಿತ್ತು. ಜಿಲ್ಲಾ ಪೊಲೀಸ್ ವರಿಷ್ಠ ದೇಬೇಶ್ ಕುಮಾರ್ ಬೆಹೆರಾ ಅವರ ನಿರ್ದಿಷ್ಟ ಸೂಚನೆ ಹಿನ್ನೆಲೆಯಲ್ಲಿ ಮೊಂಗಾಮ್‌ನಲ್ಲಿ ಪೊಲೀಸರ ತಂಡ ಕರ್ನಾಟಕ ನೋಂದಣಿ ಸಂಖ್ಯೆ ಹೊಂದಿರುವ ಲಾರಿಯನ್ನು ಪರಿಶೀಲನೆ ನಡೆಸಿತು. ಶೋಧ ಕಾರ್ಯಾಚರಣೆ ಸಂದರ್ಭ ಲಾರಿಯಲ್ಲಿ 10,000 ಡಿಟೋನೇಟರ್, 3,750 ಕಿ.ಗ್ರಾಂ. ಜಿಲೆಟಿನ್ ಕಡ್ಡಿ ಹಾಗೂ 213 ಸುರುಳಿ ಫ್ಯೂಸ್ ವಯರ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸರಕಿಗೆ ಸೂಕ್ತ ದಾಖಲೆ ನೀಡದ ಹಿನ್ನೆಲೆಯಲ್ಲಿ ಲಾರಿಯ ಇಬ್ಬರು ಚಾಲಕರನ್ನು ಬಂಧಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.