ವೆನೆಝುವೆಲ ಜೈಲಿನಲ್ಲಿ ಬೆಂಕಿ: 68 ಸಾವು
ಕ್ಯಾರಕಸ್ (ವೆನೆಝುವೆಲ), ಮಾ. 29: ವೆನೆಝುವೆಲದ ಜೈಲೊಂದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಬುಧವಾರ ಕೈದಿಗಳು ಹೊತ್ತಿಸಿದ ಬೆಂಕಿಗೆ 68 ಮಂದಿ ಬಲಿಯಾಗಿದ್ದಾರೆ.
ಕರಬೊಬೊ ರಾಜ್ಯದ ಕಾರಾಗೃಹವೊಂದರಲ್ಲಿ ಗಲಭೆ ನಡೆದಿದ್ದು, ವೆನೆಝುವೆಲದ ಕಿಕ್ಕಿರಿದ ಜೈಲುಗಳಲ್ಲಿ ನಿಯಮಿತವಾಗಿ ನಡೆಯುತ್ತಿರುವ ಮಾರಕ ಘಟನೆಗಳ ಸರಣಿಯಲ್ಲಿ ಇತ್ತೀಚಿನದಾಗಿದೆ.
‘‘ಜೈಲಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ಕೈದಿಗಳು ಚಾಪೆಗಳಿಗೆ ಬೆಂಕಿ ಹಚ್ಚಿದರು ಹಾಗೂ ಕಾವಲುಗಾರನ ಬಂದೂಕನ್ನು ಕಸಿದುಕೊಂಡರು. ಕೆಲವರು ಸುಟ್ಟು ಹೋದರು ಹಾಗೂ ಕೆಲವರು ಹೊಗೆಯಿಂದಾಗಿ ಉಸಿರುಕಟ್ಟಿ ಮೃತಪಟ್ಟರು’’ ಎಂದು ‘ಉನ ವೆಂಟನ ಅ ಲ ಲಿಬರ್ಟಡ್’ ಎಂಬ ಮಾನವಹಕ್ಕು ಸಂಘಟನೆಯ ಮುಖ್ಯಸ್ಥ ಕಾರ್ಲೊಸ್ ನೀಟೊ ಹೇಳಿದ್ದಾರೆ.
ಮೃತರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಅವರು ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಜೈಲಿಗೆ ಭೇಟಿ ನೀಡಿದವರಾಗಿರಬೇಕೆಂದು ಶಂಕಿಸಲಾಗಿದೆ.
ಮೃತಪಟ್ಟ ಕೈದಿಗಳ ಬಂಧುಗಳು ಕರಬೊಬೊ ರಾಜ್ಯ ಪೊಲೀಸ್ ಪ್ರಧಾನ ಕಚೇರಿಗೆ ನುಗ್ಗಲು ಪ್ರಯತ್ನಿಸಿದರು. ಕಲ್ಲೇಟಿನಿಂದ ಓರ್ವ ಪೊಲೀಸ್ ಗಾಯಗೊಂಡ ಬಳಿಕ, ಉದ್ರಿಕ್ತರನ್ನು ಪೊಲೀಸರು ಚದುರಿಸಿದರು.