ಎಸ್‌ಸಿ/ಎಸ್‌ಟಿ ಕಾಯ್ದೆ: ಮುಂದಿನ ವಾರ ಮರುಪರಿಶೀಲನೆ ಅರ್ಜಿ

Update: 2018-03-29 17:01 GMT

ಹೊಸದಿಲ್ಲಿ, ಮಾ.29: ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣಗಳಲ್ಲಿ ಸ್ವಯಂ ಪ್ರಕರಣ ದಾಖಲಿಸಿ ಆರೋಪಿಗಳ ಬಂಧನವನ್ನು ನಿಷೇಧಿಸಿರುವ ಸುಪ್ರೀಂಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸರಕಾರ ಮುಂದಿನ ವಾರ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಲಿದೆ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.

ಉನ್ನತ ಕಾನೂನು ಅಧಿಕಾರಿಗಳು ವಿಶ್ವಸನೀಯ ಮರುಪರಿಶೀಲನೆ ಅರ್ಜಿಯನ್ನು ಸಿದ್ಧಪಡಿಸುತ್ತಿದ್ದು, ಮುಂದಿನ ಬುಧವಾರ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಎಸ್‌ಸಿ/ಎಸ್‌ಟಿ ಕಾಯ್ದೆಗೆ ನೂತನ ಮಾನದಂಡವನ್ನು ಸುಪ್ರೀಂಕೋರ್ಟ್‌ನ ತೀರ್ಪಿನಲ್ಲಿ ಸೂಚಿಸಲಾಗಿದ್ದು, ಇದನ್ನು ಸರಕಾರ ಗಮನಿಸಿದೆ. ಮರುಪರಿಶೀಲನೆ ಅರ್ಜಿ ಸಲ್ಲಿಸುವ ಅಪೇಕ್ಷೆಯನ್ನು ಪರಿಶೀಲಿಸುವಂತೆ ಸಚಿವಾಲಯಕ್ಕೆ ತಿಳಿಸಿದ್ದೇನೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಎನ್‌ಡಿಎ ಮೈತ್ರಿಕೂಟದ ಎಸ್‌ಸಿ/ಎಸ್‌ಟಿ ಸಂಸದರು ಎಲ್‌ಜೆಪಿ ಮುಖಂಡ ರಾಮ್‌ವಿಲಾಸ್ ಪಾಸ್ವಾನ್ ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಇಲಾಖೆಯ ಸಚಿವ ಥಾವರ್‌ಚಂದ್ ಗೆಹ್ಲೋಟ್ ನೇತೃತ್ವದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಮಾಡಿ, ಸುಪ್ರೀಂಕೋರ್ಟ್‌ನ ಆದೇಶದಿಂದ ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ದುರ್ಬಲಗೊಂಡಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸುಪ್ರೀಂಕೋರ್ಟ್‌ನ ಆದೇಶದಿಂದ ಕಾಯ್ದೆ ನಿಷ್ಪ್ರಯೋಜಕವಾಗುತ್ತದೆ ಹಾಗೂ ದಲಿತರು ಹಾಗೂ ಆದಿವಾಸಿ ಜನರಿಗೆ ನ್ಯಾಯ ಒದಗಿಸುವ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಗೆಹ್ಲೋಟ್ ಇತ್ತೀಚೆಗೆ ಕಾನೂನು ಸಚಿವರಿಗೆ ಪತ್ರ ಬರೆದು ಆತಂಕ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News