ಐಪಿಎಸ್ ಅಧಿಕಾರಿಗೆ ಹಲ್ಲೆಗೈದ ಆರೋಪ: ಕೇಂದ್ರ ಸಚಿವ ಸುಪ್ರಿಯೋ ವಿರುದ್ಧ ಪ್ರಕರಣ ದಾಖಲು
Update: 2018-03-29 22:51 IST
ಹೊಸದಿಲ್ಲಿ, ಮಾ.29: ರಾಮ ನವಮಿ ವಿಚಾರದಲ್ಲಿ ಸಂಭವಿಸಿದ ಘರ್ಷಣೆಯ ನಂತರ ಪಶ್ಚಿಮ ಬಂಗಾಳದ ಅಸಂಸಾಲ್ ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ನಡುವೆ ಇಲ್ಲಿಗೆ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಆಗಮಿಸಿದ್ದು, ಅವರು ಅಸಂಸಾಲ್ ಪ್ರವೇಶಿಸದಂತೆ ತಡೆಯಲಾಗಿತ್ತು. ಈ ಸಂದರ್ಭ ಸುಪ್ರಿಯೋ ಐಪಿಎಸ್ ಅಧಿಕಾರಿಯೊಬ್ಬರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ 144 ಸೆಕ್ಷನ್ ಉಲ್ಲಂಘಿಸಿದ ಸುಪ್ರಿಯೋ ವಿರುದ್ಧ ಪ್ರಕರಣ ದಾಖಲಾಗಿದೆ.
“ಗಲಭೆ ಹಾಗು ಸೆಕ್ಷನ್ 353ರಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಸಂಸಾಲ್ ಉತ್ತರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಗಲಭೆ ಪೀಡಿತ ಪ್ರದೇಶವಾದ ಅಸಂಸಾಲ್ ಗೆ ಸುಪ್ರಿಯೋ ಪ್ರವೇಶಿಸದಂತೆ ಪೊಲೀಸರು ತಡೆದಿದ್ದರು. ಈ ಸಂದರ್ಭ ಪೊಲೀಸರು ಹಾಗು ಕೇಂದ್ರ ಸಚಿವರ ನಡುವೆ ಮಾತಿಕ ಚಕಮಕಿ ನಡೆದಿತ್ತು.