ನಮ್ಮ ಸಾಧನಗಳು ಸಾವಿಗೆ ಕಾರಣವಾಗಬಹುದು ಎಂದಿದ್ದ ಫೇಸ್ ಬುಕ್ ಉಪಾಧ್ಯಕ್ಷ!

Update: 2018-03-30 10:07 GMT

''ನಮ್ಮ ಸಾಧನಗಳು ಸಾವಿಗೆ ಕಾರಣವಾಗಬಹುದು. ಆದರೂ ನಾವು ಜನರ ನಡುವೆ ಸಂಪರ್ಕದ ಸಾಧನವಾಗಿದ್ದೇವೆ'' ಎಂದು ಇತ್ತೀಚೆಗೆ ಬಿಡುಗಡೆಗೊಂಡ ಮೆಮೋದಲ್ಲಿ ಫೇಸ್ ಬುಕ್ ಉಪಾಧ್ಯಕ್ಷ ಆ್ಯಂಡ್ರೂ ಬೋಸ್ವರ್ಥ್ ಉಲ್ಲೇಖಿಸಿದ್ದಾರೆಂದು www.bloomberg.com ವೆಬ್ ಸೈಟ್ ವರದಿ ಮಾಡಿದೆ. 

 ‘‘ನಮ್ಮ ಸಾಧನಗಳ ಮೂಲಕ ಸಂಘಟಿಸಲ್ಪಟ್ಟ ಉಗ್ರ ದಾಳಿಯೊಂದರಲ್ಲಿ ಯಾರಾದರೂ ಸಾಯಬಹುದು. ಆದರೂ ನಾವು ಜನರ ನಡುವೆ ಸಂಪರ್ಕದ ಸಾಧನವಾಗಿದ್ದೇವೆ’’ ಎಂದು 2016ರಲ್ಲಿ ಬರೆಯಲಾಗಿತ್ತೆನ್ನಲಾದ ಮೆಮೋದಲ್ಲಿ ಫೇಸ್ ಬುಕ್ ಉಪಾಧ್ಯಕ್ಷ ಆ್ಯಂಡ್ರೂ ಬೋಸ್ವರ್ಥ್ ಹೇಳಿದ್ದಾರೆ. ‘‘ಕಹಿ ಸತ್ಯವೆಂದರೆ ನಾವು ಜನರ ನಡುವೆ ಸಂಪರ್ಕ ಸಾಧನವಾಗುತ್ತೇವೆಂದು ನಂಬಿದ್ದೇವೆ, ಅದೆಷ್ಟೆಂದರೆ ಹೆಚ್ಚು ಜನರನ್ನು ಸಂಪರ್ಕಿಸುವ ಸಾಧನವು ವಸ್ತುಶಃ ಒಳ್ಳೆಯದು ಎಂದು ನಂಬಿದ್ದೇವೆ’’ ಎಂದು ಅವರು ಬರೆದಿರುವುದಾಗಿ 'ಬ್ಲೂಂಬರ್ಗ್' ವರದಿ ಮಾಡಿದೆ.

ಯಾವುದೇ ಬೆಲೆ ತೆತ್ತಾದರೂ ಅಭಿವೃದ್ಧಿ ಸಾಧಿಸಬೇಕೆಂಬ ಫೇಸ್ ಬುಕ್ ಉದ್ದೇಶವನ್ನು ಈ ಮೆಮೋ ವಿವರಿಸುತ್ತದೆಯಲ್ಲದೆ, ಸೋಶಿಯಲ್ ನೆಟ್ವರ್ಕ್ ನ ಕೆಟ್ಟ ಪರಿಣಾಮಗಳು, ಸಾವುಗಳು ಹಾಗೂ ಉಗ್ರ ದಾಳಿಗಳು ಕೂಡ ಅದು ಜನರ ನಡುವೆ ಸಂಪರ್ಕ ಸೇತುವಾಗುವುದನ್ನು ತಪ್ಪಿಸಲು ಕಾರಣವಾಗದು ಎಂದು ವಿವರಿಸಲಾಗಿದೆ.

ತಪ್ಪು ಮಾಹಿತಿ, ಹಿಂಸಾತ್ಮಕ ವೀಡಿಯೋಗಳು, ಜನಾಂಗೀಯ ನಿಂದನೆಗೈಯ್ಯುವ ಜಾಹೀರಾತುಗಳು ಹಾಗೂ ಕಳೆದ ವಾರ ಖಾಸಗಿತನದ ವಿಚಾರದ ಹಗರಣ ಫೇಸ್ ಬುಕ್ ಅನ್ನು ಬೆಂಬಿಡದೆ ಕಾಡಿತ್ತು.

‘ದಿ ಅಗ್ಲಿ’ ಎಂಬ ಶೀರ್ಷಿಕೆಯ ಮೆಮೋದಲ್ಲಿ ಫೇಸ್ ಬುಕ್ ಉಪಾಧ್ಯಕ್ಷ ಆ್ಯಂಡ್ರೂ, ತಮ್ಮ ಸಂಸ್ಥೆ ಪ್ರಗತಿ ಸಾಧಿಸಲು ತೆಗೆದುಕೊಳ್ಳಬೇಕಾದ ರಿಸ್ಕ್ ಗಳು ಭವಿಷ್ಯದ ದೊಡ್ಡ ಉದ್ದೇಶ ಈಡೇರಿಸಲು ಅಗತ್ಯ ಎಂದಿದ್ದಾರೆ.

‘‘ಇದೇ ಕಾರಣಕ್ಕೆ ಅಭಿವೃದ್ಧಿಗಾಗಿ ನಾವು ಮಾಡುವ ಕೆಲಸಗಳೆಲ್ಲಾ ಸಮರ್ಥನೀಯ. ಎಲ್ಲಾ ಪ್ರಶ್ನಾರ್ಹ ಕಾಂಟಾಕ್ಟ್ ಇಂಪೋರ್ಟಿಂಗ್ ಪದ್ಧತಿಗಳು, ಜನರಿಗೆ ಪರಸ್ಪರ ಸಂಪರ್ಕದಲ್ಲಿರುವಂತಹ ಸಾಧನಗಳು, ಇವುಗಳನ್ನೆಲ್ಲಾ ಸಮರ್ಥಿಸಬೇಕಾಗಿದೆ’’ ಎಂದು ಅವರು ಬರೆದಿದ್ದಾರೆ.

ಈ ಮೆಮೋ ಬಗ್ಗೆ ಟ್ವಿಟ್ಟರ್ ನಲ್ಲಿ ಗುರುವಾರ ಪ್ರತಿಕ್ರಿಯಿಸಿದ ಬೋಸ್ವರ್ಥ್, ಅದರಲ್ಲಿ ಬರೆದಿದ್ದನ್ನು ತಾವು ಈಗ ಸಂಪೂರ್ಣವಾಗಿ ಒಪ್ಪುವುದಿಲ್ಲ ಎಂದಿದ್ದಾರೆ. ‘‘ಅದನ್ನು ಬರೆದಿದ್ದಾಗಲೂ ನಾನು ಅದನ್ನು ಒಪ್ಪಿರಲಿಲ್ಲ’’ ಎಂದು ಅವರು ಹೇಳಿದ್ದಾರೆ. ‘‘ಇದನ್ನು ಗಮನಿಸಿದರೆ ನಾನು ಹೊಂದಿರುವ ಅಥಾ ಕಂಪೆನಿ ಹೊಂದಿರುವ ಧೋರಣೆ ಇದೆಂದು ಯಾರಿಗಾದರೂ ಅನಿಸಬಹುದು. ನಮ್ಮ ಸಾಧನಗಳು ಜನರನ್ನು ಹೇಗೆ ಬಾಧಿಸುತ್ತವೆ ಎಂಬ ಬಗ್ಗೆ ನಮಗೆ ಕಾಳಜಿಯಿದೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News