×
Ad

‘ಫೇಕ್ ನ್ಯೂಸ್’ ಕುಖ್ಯಾತಿಯ ಮಹೇಶ್ ವಿಕ್ರಂ ಹೆಗ್ಡೆ ಪರ ಬಿಜೆಪಿ ನಾಯಕರ ಬ್ಯಾಟಿಂಗ್

Update: 2018-03-30 17:39 IST

ಸುಳ್ಳು ಸುದ್ದಿ ಪ್ರಕಟಿಸುವ ಈತ ದೇಶಭಕ್ತನಂತೆ!

ಸುಳ್ಳು ಸುದ್ದಿ ಪ್ರಕಟಿಸಿ ದ್ವೇಷ ಹರಡಲು ಯತ್ನಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಪೋಸ್ಟ್ ಕಾರ್ಡ್ ನ್ಯೂಸ್ ವೆಬ್ ಸೈಟ್ ನ ಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆಯ ಪರ ಬಿಜೆಪಿಯ ನಾಯಕರು ಈಗಾಗಲೇ ಬ್ಯಾಟಿಂಗ್ ಆರಂಭಿಸಿದ್ದಾರೆ.

“ಮಹೇಶ್ ವಿಕ್ರಂ ಹೆಗ್ಡೆಯನ್ನು ಬಂಧಿಸುವ ಮೂಲಕ ಸರ್ವಾಧಿಕಾರಿಯಂತೆ ವರ್ತಿಸಿದ ಸಿದ್ದರಾಮಯ್ಯ ಸರಕಾರಕ್ಕೆ ನಾಚಿಕೆಯಾಗಬೇಕು” ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರ ಅಫಿಶಿಯಲ್ ಟ್ವಿಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡಲಾಗಿದೆ.

ಫೇಕ್ ಸುದ್ದಿಗಳನ್ನು ಪ್ರಕಟಿಸುವ ವೆಬ್ ಸೈಟ್ ಎಂದೇ ಕುಖ್ಯಾತಿ ಗಳಿಸಿರುವ ಪೋಸ್ಟ್ ಕಾರ್ಡ್ ನ್ಯೂಸ್ ನ ಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆಯ ಬಂಧನದ ನಂತರ ಕೇಂದ್ರ ಸಚಿವರು ಈ ಟ್ವೀಟ್ ಮಾಡಿದ್ದಾರೆ.

ಜೈನ ಮುನಿ ಶ್ರೀಉಪಾಧ್ಯಾಯ ಮಾಯಾಂಕ್ ಸಾಗರ್ ಜಿ ಮಹಾರಾಜ್‌ ಎಂಬವರು ಇತ್ತೀಚೆಗೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದರು. ಆದರೆ ಮಹೇಶ್ ವಿಕ್ರಂ ಹೆಗ್ಡೆಯ ಪೋಸ್ಟ್ ಕಾರ್ಡ್ ನ್ಯೂಸ್ ವೆಬ್ ಸೈಟ್ "ಮುಸ್ಲಿಮ್ ಯುವಕರು ಜೈನ ಮುನಿಯ ಮೇಲೆ ಹಲ್ಲೆ ನಡೆಸಿದ್ದಾರೆ" ಎಂದು ಸುಳ್ಳು ಸುದ್ದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಗಫ್ಫಾರ್ ಬೇಗ್ ಎಂಬವರು ಅವರು ವೆಬ್‌ಸೈಟ್‌ನ ಮಾಲಕ ಮಹೇಶ್ ವಿಕ್ರಂ ಹೆಗಡೆ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಹೇಶ್ ವಿಕ್ರಂ ಹೆಗಡೆಯನ್ನು ಬಂಧಿಸಿದ್ದರು.

ಮಹೇಶ್ ವಿಕ್ರಂ ಹೆಗ್ಡೆಯ ಬಂಧನವಾಗುತ್ತಲೇ ಬಿಜೆಪಿ ಹಲವು ನಾಯಕರು ಆತನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆತನ ಬಂಧನವನ್ನು ಖಂಡಿಸಿದ್ದಾರೆ.

ದಿಲ್ಲಿಯ ಬಿಜೆಪಿ ಸಂಸದ ಹಾಗು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಈ ಬಗ್ಗೆ ಟ್ವೀಟ್ ಮಾಡಿದ್ದು, “ಮಹೇಶ್ ವಿಕ್ರಂ ಹೆಗ್ಡೆಯವರ ಬಂಧನ ಹಾಗು ಹಲವು ದೇಶಭಕ್ತ ಟ್ವಿಟರಿಗರ ಮೇಲಿನ ಎಫ್ ಐಆರ್ ಸಿದ್ದರಾಮಯ್ಯ ಸರಕಾರದ ನಾಚಿಕೆಗೆಟ್ಟ ಕ್ರಮವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಮಹೇಶ್ ವಿಕ್ರಂ ಹೆಗ್ಡೆಯ ಬಂಧನದ ಬಗ್ಗೆ ಮೊದಲು ಟ್ವೀಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹ, “ಐಟಿ ಕಾಯ್ದೆ 66ರಡಿ ಮಹೇಶ್ ವಿಕ್ರಂ ಹೆಗ್ಡೆಯವರನ್ನು ಹೇಡಿ ಕಾಂಗ್ರೆಸ್ ಸರಕಾರ ಬಂಧಿಸಿದೆ” ಎಂದಿದ್ದರು.

ಕರ್ನಾಟಕ ಬಿಜೆಪಿಯ ವಕ್ತಾರ ಪ್ರಕಾಶ್ ಎಸ್. ಈ ಬಗ್ಗೆ ಟ್ವೀಟ್ ಮಾಡಿ ಸಿದ್ದರಾಮಯ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಭಾರತ್ ತೇರೆ ಟುಕ್ಡೇ ಕರೇಂಗೇ ಬ್ರಿಗೇಡ್”ಗೆ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶಭಕ್ತ ಮಹೇಶ್ ವಿಕ್ರಂ ಹೆಗ್ಡೆಗೆ ನಿರಾಕರಿಸಲಾಗಿದೆ” ಎಂದು ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

ಇಷ್ಟೇ ಅಲ್ಲದೆ ಬಿಜೆಪಿ ಪರ ಇರುವ ಹಲವು ಟ್ವಿಟರಿಗರು ಮಹೇಶ್ ವಿಕ್ರಂ ಹೆಗ್ಡೆಯ ಬಂಧನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಜೈನ ಮುನಿಯೊಬ್ಬರ ಫೋಟೊ ಪ್ರಕಟಿಸಿ ಮುಸ್ಲಿಮ್ ಯುವಕರಿಂದ ನಡೆದ ದಾಳಿ ಎಂದು ಸುದ್ದಿ ಪ್ರಕಟಿಸಿ, ಸಮಾಜದಲ್ಲಿ ಕೋಮುದ್ವೇಷ ಬಿತ್ತಲು ಮುಂದಾದ ಮಹೇಶ್ ವಿಕ್ರಂ ಹೆಗ್ಡೆಯ ಕೃತ್ಯ ಎಂತದ್ದು ಎಂದು ಯೋಚಿಸುವ ಗೋಜಿಗೇ ಈ ರಾಜಕಾರಣಿಗಳು ಹೋಗದೇ ಇರುವುದು ವಿಪರ್ಯಾಸವೇ ಸರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News