ವ್ಯಕ್ತಿಯ ತುಂಡಾದ ಪಾದವನ್ನು ಕಾಲುಗಳ ನಡುವೆ ಇಟ್ಟ ವೈದ್ಯರು!
ಲಕ್ನೋ, ಮಾ.30: ವೈದ್ಯಕೀಯ ನಿರ್ಲಕ್ಷ್ಯದ ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬನ ತುಂಡಾದ ಪಾದವನ್ನು ಆತನ ಎರಡೂ ಕಾಲುಗಳ ನಡುವೆ ಸ್ಟ್ರೆಚರಿನಲ್ಲಿಯೇ ಎರಡು ಗಂಟೆಗಳಿಗೂ ಹೆಚ್ಚು ಕಾಲ ಇರಿಸಿದ ಘಟನೆ ಉತ್ತರ ಪ್ರದೇಶದ ಸುಲ್ತಾನಪುರದ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಅತುಲ್ ಪಾಂಡೆ (48) ಎಂಬವರ ಕಾಲಿನ ಮೇಲೆ ರೈಲು ಹರಿದ ಕಾರಣ ಅವರೆ ಪಾದ ತುಂಡಾಗಿತ್ತು. ಕೂಡಲೇ ಹತ್ತಿರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಅತುಲ್ ಪಾಂಡೆಯ ತುಂಡಾದ ಪಾದವನ್ನು ಹಾಗೆಯೇ ಸ್ಟ್ರೇಚರಿನಲ್ಲಿರಿಸಲಾಗಿತ್ತು. ಕೊನೆಗೆ ಇದನ್ನು ನೋಡಿದ ಜನರು ಫೋಟೋ ಕ್ಲಿಕ್ಕಿಸಲಾರಂಭಿಸಿದಾಗ ವೈದ್ಯರು ಎಚ್ಚರಗೊಂಡಿದ್ದರು.
ಆದರೆ ವೈದ್ಯರು ರೋಗಿಯನ್ನು ನಿರ್ಲಕ್ಷ್ಯಿಸಲಿಲ್ಲವೆಂದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಸುಪರಿಂಟೆಂಡೆಂಟ್ ಯೋಗೇಂದ್ರ ಯತಿ ಹೇಳಿದ್ದಾರೆ. ಅವರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗಿತ್ತು ಎಂದೂ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಇಂತಹದೇ ಇನ್ನೊಂದು ಘಟನೆಯಲ್ಲಿ ಬಸ್ ಅಪಘಾತವೊಂದರಲ್ಲಿ ತುಂಡಾದ ವ್ಯಕ್ತಿಯೊಬ್ಬನ ಕಾಲನ್ನು ಝಾನ್ಸಿಯ ಸರಕಾರಿ ಮಹಾರಾಣಿ ಲಕ್ಷ್ಮೀಬಾಯಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ತಲೆದಿಂಬಿನಂತೆ ಉಪಯೋಗಿಸಲಾಗಿತ್ತು. ಈ ಸಂಬಂಧ ನಾಲ್ಕು ಮಂದಿ ಆಸ್ಪತ್ರೆಯ ಸಿಬ್ಬಂದಿಯನ್ನು ವಜಾಗೊಳಿಸಲಾಗಿತ್ತಲ್ಲದೆ ಇಲಾಖಾ ತನಿಖೆಗೂ ಆದೇಶಿಸಲಾಗಿತ್ತು.