ಎಪ್ರಿಲ್ 25: ಸಿಬಿಎಸ್‌ಇ 12ನೇ ತರಗತಿ ಅರ್ಥಶಾಸ್ತ್ರ ಮರುಪರೀಕ್ಷೆ
ಹೊಸದಿಲ್ಲಿ, ಮಾ.30: ಸಿಬಿಎಸ್‌ಇ 12ನೇ ತರಗತಿಯ ಅರ್ಥಶಾಸ್ತ್ರ ಮರುಪರೀಕ್ಷೆಯು ಎಪ್ರಿಲ್ 25ರಂದು ನಡೆಯಲಿದೆ. ಆದರೆ 10ನೇ ತರಗತಿಯ ಗಣಿತ ಮರುಪರೀಕ್ಷೆಯ ಬಗ್ಗೆ ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಕೇಂದ್ರ ಶಿಕ್ಷಣ ಕಾರ್ಯದರ್ಶಿ ಅನಿಲ್ ಸ್ವರೂಪ್ ಶುಕ್ರವಾರ ತಿಳಿಸಿದ್ದಾರೆ.
10ನೇ ತರಗತಿಯ ಪ್ರಶ್ನೆ ಪತ್ರಿಕೆಯು ಕೇವಲ ದಿಲ್ಲಿ ಮತ್ತು ಹರ್ಯಾಣದಲ್ಲಿ ಸೋರಿಕೆಯಾಗಿರುವ ಕಾರಣ ಮರುಪರೀಕ್ಷೆಯನ್ನು ದಿಲ್ಲಿ ಮತ್ತು ಹರ್ಯಾಣದಲ್ಲಿ ಮಾತ್ರ ನಡೆಸಲಾಗುವುದು. ಈ ಬಗ್ಗೆ ನಿರ್ಧಾರವನ್ನು ಮುಂದಿನ 15 ದಿನಗಳ ಒಳಗೆ ತೆಗೆದುಕೊಳ್ಳಲಾಗುವುದು. ಒಂದು ವೇಳೆ ಮರುಪರೀಕ್ಷೆ ನಡೆದರೆ ಅದು ಜುಲೈಯಲ್ಲಿ ನಡೆಯಲಿದೆ ಎಂದು ಸ್ವರೂಪ್ ತಿಳಿಸಿದ್ದಾರೆ.
ಹೊರದೇಶಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂಬ ಮಾಹಿತಿಯಿದೆ. ಹಾಗಾಗಿ ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸೋರಿಕೆಯಾದ ಪತ್ರಿಕೆಯು ದಿಲ್ಲಿಯ ಕನಿಷ್ಟ ಒಂದು ಸಾವಿರ ವಿದ್ಯಾರ್ಥಿಗಳ ಕೈಸೇರಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಮಾರ್ಚ್ 23ರಂದು ಸಿಬಿಎಸ್‌ಸಿಗೆ ಬಂದ ಫ್ಯಾಕ್ಸ್‌ನಲ್ಲಿ 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆಯು ಸೋರಿಕೆಯಾಗಿರುವ ಬಗ್ಗೆ ಎಚ್ಚರಿಸಲಾಗಿತ್ತು. ಈ ಸೋರಿಕೆಯಲ್ಲಿ ದಿಲ್ಲಿಯ ಒಂದು ತರಬೇತಿ ಕೇಂದ್ರ ಮತ್ತು ಎರಡು ಶಾಲೆಗಳು ಶಾಮೀಲಾಗಿವೆ ಎಂದು ಫ್ಯಾಕ್ಸ್‌ನಲ್ಲಿ ಆರೋಪಿಸಲಾಗಿತ್ತು. ಅದರಂತೆ ಮಾರ್ಚ್ 28ರಂದು ಹತ್ತನೇ ತರಗತಿ ಗಣಿತದ ಪತ್ರಿಕೆಗಳು ವಾಟ್ಸ್‌ಆ್ಯಪ್‌ನಲ್ಲಿ ಸೋರಿಕೆಯಾಗಿತ್ತು. ಪರೀಕ್ಷೆಗೆ ಹತ್ತು ಗಂಟೆ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರೂ ಈ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಿರಲಿಲ್ಲ. ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಪೊಲೀಸರು 11 ಶಾಲಾ ವಿದ್ಯಾರ್ಥಿಗಳು ಮತ್ತು ಏಳು ಪ್ರಥಮ ವರ್ಷದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 25 ಜನರ ವಿಚಾರಣೆ ನಡೆಸಿದ್ದಾರೆ.
ಇದೇ ಮೊದಲ ಬಾರಿ ಸಿಬಿಎಸ್‌ಇ ಪರೀಕ್ಷಾ ಮೇಲ್ವಿಚಾರಕರ ವಿಚಾರಣೆ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿ ಜಾರ್ಖಂಡ್‌ನಲ್ಲಿ ಆರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.