ಏರ್ ಇಂಡಿಯಾ ಮಾರಾಟ 'ಇನ್ನೊಂದು ಹಗರಣ'
ಹೊಸದಿಲ್ಲಿ, ಮಾ.31: ನರೇಂದ್ರ ಮೋದಿ ಸರ್ಕಾರ ಏರ್ ಇಂಡಿಯಾ ಮಾರಾಟಕ್ಕೆ ಯೋಜನೆ ಅನಾವರಣಗೊಳಿಸಿರುವ ನಡುವೆಯೇ ಪಕ್ಷದ ಸಂಸದ ಸುಬ್ರಮಣಿಯನ್ ಸ್ವಾಮಿ "ಏರ್ ಇಂಡಿಯಾ ಮಾರಾಟ ಇನ್ನೊಂದು ಹಗರಣ" ಎಂಬ ಗಂಭೀರ ಆರೋಪ ಮಾಡಿದ್ದಾರೆ. ಏರ್ ಇಂಡಿಯಾ ಮಾರಾಟದಲ್ಲಿ ತೊಡಗಿದವರ ವಿರುದ್ಧ ಇವರು ಖಾಸಗಿ ಅಪರಾಧ ಕಾನೂನು ದೂರು ನೀಡುವ ನಿರೀಕ್ಷೆ ಇದೆ.
ಏರ್ ಇಂಡಿಯಾದ ಮಾರಾಟ ಪ್ರಸ್ತಾಪ ಇನ್ನೊಂದು ಹಗರಣ ಸೃಷ್ಟಿಸಲಿದೆ. ಕುಟುಂಬದ ಬೆಳ್ಳಿಯನ್ನು ಮಾರಾಟ ಮಾಡುವುದು ಬಂಡವಾಳ ಹಿಂತೆಗೆತವಲ್ಲ. ಯಾರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ನಾನು ನೋಡುತ್ತಿದ್ದೇನೆ. ಇದರಲ್ಲಿ ತಪ್ಪು ಕಂಡುಬಂದರೆ, ದೂರು ದಾಖಲಿಸುತ್ತೇನೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಏರ್ ಇಂಡಿಯಾ ಬಂಡವಾಳ ಹಿಂತೆಗೆತ ಪ್ರಸ್ತಾಪ ಸರ್ಕಾರದ ಮುಂದೆ ಬಂದಾಗಲೇ ರಾಜ್ಯಸಭಾ ಸದಸ್ಯರಾಗಿರುವ ಸ್ವಾಮಿ, ಅಚ್ಚರಿ ವ್ಯಕ್ತಪಡಿಸಿದ್ದರು. ವಿಮಾನಗಳು ಭರ್ತಿಯಾಗುತ್ತಿರುವಾಗ ಮಾರಾಟ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದರು. ಏರ್ ಇಂಡಿಯಾ 52 ಸಾವಿರ ಕೋಟಿ ರೂ. ಸಾಲದ ಹೊರೆ ಹೊಂದಿದ್ದು, 2012ರಲ್ಲಿ ಯುಪಿಎ ಸರ್ಕಾರ ನೀಡಿದ 30 ಸಾವಿರ ಕೋಟಿ ಮನ್ನಾ ಯೋಜನೆಯಿಂದಾಗಿ ಅಸ್ತಿತ್ವ ಉಳಿಸಿಕೊಂಡಿದೆ.
ಏರ್ ಇಂಡಿಯಾದಿಂದ ಕಾರ್ಯತಂತ್ರ ಬಂಡವಾಳ ಹೂಡಿಕೆ ಬಂಡವಾಳ ಹಿಂತೆಗೆತದ ಪ್ರಾಥಮಿಕ ಮಾಹಿತಿ ಒಡಂಬಡಿಕೆಯನ್ನು ಆಸಕ್ತಿ ಅಭಿವ್ಯಕ್ತಿಯನ್ನು ಆಹ್ವಾನಿಸಿ ಬಿಡುಗಡೆ ಮಾಡಿದೆ. ಶೇಕಡ 76ರಷ್ಟು ಬಂಡವಾಳ ಹಕ್ಕು ಮತ್ತು ಆಡಳಿತ ನಿಯಂತ್ರಣವನ್ನು ಖಾಸಗಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿದೆ.