ಎನ್‌ಕೌಂಟರ್ ನಡೆಯುವ ವೇಳೆ ಸೈನಿಕರ ಜೊತೆ ಫೊಟೊ ತೆಗೆಸಿಕೊಂಡ ಬಿಜೆಪಿ ಶಾಸಕ !
Update: 2018-03-31 21:13 IST
ಹೊಸದಿಲ್ಲಿ, ಮಾ.31: ಇತ್ತೀಚೆಗೆ ನಡೆದ ಸುಂದರ್‌ಬನಿ ಎನ್‌ಕೌಂಟರ್ ವೇಳೆ ವಿಶೇಷ ಕಾರ್ಯಾಚರಣೆ ಪಡೆಯ ಸಿಬ್ಬಂದಿ ಹಾಗೂ ಭಾರತೀಯ ಸೇನೆಯ ಯೋಧರ ಜೊತೆ ಫೋಟೊ ತೆಗೆಸಿಕೊಂಡ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಶಾಸಕ ರವಿಂದರ್ ರೈನಾ ಈಗ ವಿವಾದಕ್ಕೆ ಕಾರಣರಾಗಿದ್ದಾರೆ.
ರೈನಾ, ಎನ್‌ಕೌಂಟರ್ ನಡೆಯುತ್ತಿರುವಾಗಲೇ ಸೈನಿಕರ ಜೊತೆ ಫೋಟೊ ತೆಗೆಸಿಕೊಂಡು ನಂತರ ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶಾಸಕನ ಈ ವರ್ತನೆಯು ಭದ್ರತೆಯ ಉಲ್ಲಂಘನೆ ಮತ್ತು ಪ್ರಮಾಣಿತ ಕಾರ್ಯಾಚರಣೆ ಪ್ರಕ್ರಿಯೆಯ ವಿರುದ್ಧವಾಗಿದೆ ಎಂದು ವಿವಿಧ ಭದ್ರತಾ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆ ತಿಳಿಸಿದೆ.
ಈ ಪ್ರಕರಣದ ತನಿಖೆ ನಡೆಸುವುದಾಗಿ ಎಸ್‌ಎಸ್‌ಪಿ ಮನ್ಹಸ್ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಸುಂದರ್‌ಬನಿ ಉಪವಿಭಾಗದಲ್ಲಿ ಬುಧವಾರದಂದು ಭದ್ರತಾ ಸಿಬ್ಬಂದಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ಕು ಶಂಕಿತ ಉಗ್ರರನ್ನು ಹತ್ಯೆ ಮಾಡಿದ್ದರು.