ವಿವಾದಾತ್ಮಕ ಹೇಳಿಕೆಗಾಗಿ ಅನಂತ್ ಕುಮಾರ್ ಹೆಗಡೆಗೆ ಛೀಮಾರಿ ಹಾಕಬೇಕು

Update: 2018-03-31 15:57 GMT

ಬೆಂಗಳೂರು, ಮಾ.31: ಇಂಡಿಯ ಟುಡೆ ಸಮೂಹವು ಶನಿವಾರ ಬೆಂಗಳೂರಿನಲ್ಲಿ ನಡೆಸಿದ ಕರ್ನಾಟಕ ಪಂಚಾಯತ್ ಕಾರ್ಯಕ್ರಮದ ಸಂಸ್ಕೃತಿ ಕದನ ವಿಭಾಗದಲ್ಲಿ ಭಾಗವಹಸಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಕಾರ್ಯಕ್ರಮವನ್ನು ಯುದ್ಧಕಣವಾಗಿ ಬದಲಾಯಿಸಿದ್ದಾರೆ.

ಈ ಚರ್ಚಾ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರಾಜ್, ಕಾಂಗ್ರೆಸ್ ನಾಯಕಿ ಖುಷ್ಬೂ ಸುಂದರ್, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಮತ್ತು ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಭಾಗವಹಿಸಿದ್ದರು.

ಪ್ರಧಾನಿ ಮೋದಿಯ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಘೋಷಣೆಗೆ ಕುಹಕವಾಡಿದ ಖುಷ್ಬೂ, ನನಗೆ ಕಾಣುತ್ತಿರುವುದು ಸಬ್‌ಕಾ ಸಾಥ್ ಮೋದಿ ಕಾ ವಿಕಾಸ್ ಎಂದು ಕುಟುಕಿದರು. ಬಿಜೆಪಿ ಸಿದ್ಧಾಂತವೇನಿದ್ದರೂ ಒಂದು ದೇಶ ಒಂದು ಧರ್ಮ ಎಂದು ಅವರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಳವಿಕಾ, ಸಿದ್ದರಾಮಯ್ಯ ಸರಕಾರ ಆರ್‌ಎಸ್‌ಎಸ್ ಮತ್ತು ಬಿಜೆಪಿಯ 24 ಕಾರ್ಯಕರ್ತರನ್ನು ಹತ್ಯೆ ಮಾಡಿದೆ. ಅದರಲ್ಲಿ ಕೆಲವು ಸೆಕ್ಷನ್ 144 ಜಾರಿಯಲ್ಲಿರುವಾಗಲೇ ನಡೆದಿದೆ ಎಂದು ಆರೋಪಿಸಿದರು. ಇಡೀ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ಸಚಿವ ಅನಂತ ಕುಮಾರ್ ಹೆಗ್ಡೆ ಹೆಸರು ಹಲವು ಬಾರಿ ಥಳಕು ಹಾಕಿತು. ಸಂವಿಧಾನ ಬದಲಾಯಿಸುತ್ತೇವೆ ಮತ್ತು ಜಾತ್ಯತೀತರು ಎಂದು ಕರೆಸಿಕೊಳ್ಳುವವರಿಗೆ ತಮ್ಮ ಹೆತ್ತವರು ಯಾರೆಂದು ತಿಳಿದಿಲ್ಲ ಎಂಬಂಥ ಹೇಳಿಕೆಗಳನ್ನು ನೀಡಿರುವ ಹೆಗ್ಡೆ ವಿರುದ್ಧ ಪ್ರಕಾಶ್ ರಾಜ್ ಮತ್ತು ಖುಷ್ಬೂ ಟೀಕೆಗಳ ಸುರಿಮಳೆಗರೆದರು.

ಪಕ್ಷದ ಒಬ್ಬ ಸದಸ್ಯ ನೀಡಿರುವ ಹೇಳಿಕೆಗೆ ಇಡೀ ಪಕ್ಷವನ್ನೇ ಹೊಣೆಯಾಗಿಸುವುದು ಸರಿಯಲ್ಲ ಎಂದು ಬಾಬುಲ್ ಸುಪ್ರಿಯೋ ತಿಳಿಸಿದರು. ಹೆಗ್ಡೆಯನ್ನು ಪಕ್ಷದಿಂದ ಉಚ್ಚಾಟಿಸಬಹುದಲ್ಲವೇ ಎಂದು ಪ್ರಕಾಶ್ ರಾಜ್ ಕೇಳಿದಾಗ, ಹೆಗ್ಡೆಗೆ ಛೀಮಾರಿ ಹಾಕಬೇಕು ಎಂದಷ್ಟೇ ಸುಪ್ರಿಯೋ ಅಭಿಪ್ರಾಯಪಟ್ಟರು. ಇದೇ ವೇಳೆ, ಖುಷ್ಬೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಅವರೊಬ್ಬ ಉತ್ತಮ ನಾಯಕ ಮತ್ತು ಅದ್ಭುತ ಆಡಳಿತಗಾರ ಎಂದು ಖುಷ್ಬೂ ಬಣ್ಣಿಸಿದರು. ವಾಜಪೇಯಿಯವರು ಸಮಾನತೆಯಲ್ಲಿ ನಂಬಿಕೆಯಿಟ್ಟವರಾಗಿದ್ದರು ಎಂದು ನಟಿ-ರಾಜಕಾರಣಿ ಖುಷ್ಬೂ ತಿಳಿಸಿದರು. ವಿವಾದಾತ್ಮಕ ತ್ರಿವಳಿ ತಲಾಕ್‌ಅನ್ನು ನಿಷೇಧಿಸುವ ಅಗತ್ಯವಿದೆ ಎಂದೂ ಖುಷ್ಬೂ ಸುಂದರ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News