×
Ad

5 ಲಕ್ಷ ರೂ.ನೀಡಿ ನೀತಿ ಸಂಹಿತೆ ಉಲ್ಲಂಘಿಸಿದ ಶಾ, ಯಡಿಯೂರಪ್ಪ ವಿರುದ್ಧ ಕ್ರಮ ಜರಗಿಸಿ: ಚು.ಆಯೋಗಕ್ಕೆ ಕಾಂಗ್ರೆಸ್ ಆಗ್ರಹ

Update: 2018-04-02 22:40 IST

ಹೊಸದಿಲ್ಲಿ, ಎ.2: ಮೃತ ವ್ಯಕ್ತಿಯ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡುವ ಮೂಲಕ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕೂಡಲೇ ಕ್ರಮ ಜರಗಿಸಬೇಕು ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಆಗ್ರಹಿಸಿದೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, ಬಿಜೆಪಿ ಕಾರ್ಯಕರ್ತ ರಾಜು ಅವರನ್ನು 2016ರ ಮಾರ್ಚ್‌ನಲ್ಲಿ ಮೈಸೂರಿನಲ್ಲಿ ಹತ್ಯೆ ಮಾಡಲಾಗಿತ್ತು. ಆದರೆ ಅವರ ಕುಟುಂಬಕ್ಕೆ ಅಮಿತ್ ಶಾ, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಮತ್ತು ಯಡಿಯೂರಪ್ಪ ಕಳೆದ ಶುಕ್ರವಾರ ಭೇಟಿ ನೀಡಿದ್ದ ವೇಳೆ ಪರಿಹಾರ ನೀಡಿದ್ದಾರೆ. ಚುನಾವಣಾ ಆಯೋಗವು ರಾಜ್ಯದಲ್ಲಿ ನೀತಿ ಸಂಹಿತೆ ಜಾರಿ ಮಾಡಿದ ಮೂರು ದಿನಗಳ ನಂತರ ಪರಿಹಾರವನ್ನು ನೀಡಲಾಗಿದೆ. ಹಾಗಾಗಿ ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯು ಮತದಾರರ ಮೇಲೆ ಪ್ರಭಾವ ಬೀರಲು ಹಣವನ್ನು ಹಂಚುತ್ತಿದೆ. ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಸೋಲಲಿದ್ದೇವೆ ಎಂದು ಈಗಲೇ ತಿಳಿದಿರುವ ಬಿಜೆಪಿ ಹತಾಶೆಯಿಂದ ಮತದಾರರನ್ನು ಓಲೈಸಲು ಇನ್ನಿಲ್ಲದಂತೆ ಪರದಾಡುತ್ತಿದೆ ಎಂದು ಸಿಂಘ್ವಿ ತಿಳಿಸಿದ್ದಾರೆ.

ಯಡಿಯೂರಪ್ಪ ನಂ. ವನ್ ಭ್ರಷ್ಟ ನಾಯಕ ಎಂದು ಅಮಿತ್ ಶಾ ಅವರೇ ಹೇಳಿದ್ದಾರೆ. ಇದೀಗ ಮೃತ ರಾಜು ಅವರ ಕುಟುಂಬಸ್ಥರ ಮತಗಳನ್ನು ಪಡೆಯಬೇಕು ಎಂಬ ಒಂದೇ ಉದ್ದೇಶದಿಂದ ಅವರಿಗೆ ಐದು ಲಕ್ಷ ರೂ. ಪರಿಹಾರ ನೀಡಿದ್ದಾರೆ. ಆಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಸಿಂಘ್ವಿ ನೇತೃತ್ವದ ನಿಯೋಗ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News