ಮಂಗಳೂರು ವಿಮಾನ ನಿಲ್ದಾಣದ ಪಾರ್ಕಿಂಗ್ ಗುತ್ತಿಗೆ ಏಜೆನ್ಸಿ ಗೆ 2.58 ಲಕ್ಷ ರೂ. ದಂಡ

Update: 2018-04-03 14:16 GMT
ವಿ.ವಿ.ರಾವ್

ಮಂಗಳೂರು, ಎ.3: ಭಾರತದ ಅತ್ಯಂತ ಸ್ವಚ್ಛ ವಿಮಾನ ನಿಲ್ದಾಣ ಖ್ಯಾತಿಗೆ ಪಾತ್ರವಾಗಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಏಜೆನ್ಸಿಯವರು ಹೆಚ್ಚುವರಿ ಪಾರ್ಕಿಂಗ್ ಶುಲ್ಕ ವಸೂಲು ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರವು, ಪಾರ್ಕಿಂಗ್ ವ್ಯವಸ್ಥೆಯ ಗುತ್ತಿಗೆ ವಹಿಸಿರುವ ಏಜೆನ್ಸಿಗೆ 2.58 ಲಕ್ಷ ರೂ. ದಂಡ ವಿಧಿಸಿದ್ದಾರೆ. ಮಾತ್ರವಲ್ಲದೆ, ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕ ವಾಹನಗಳಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 

ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ.ರಾವ್, ಎಲ್ಲ ವಿಮಾನ ನಿಲ್ದಾಣಗಳಲ್ಲಿ ಮುಂಬೈನ ಎಸ್.ಎಸ್. ಎಂಟರ್‌ಪ್ರೈಸಸ್ ಸಂಸ್ಥೆ ಪಾರ್ಕಿಂಗ್ ಶುಲ್ಕ ಸಂಗ್ರಹದ ಗುತ್ತಿಗೆಯನ್ನು ವಹಿಸಿಕೊಂಡಿದೆ. ಈ ಸಂಸ್ಥೆಯು ಬೇರೆ ವಿಮಾನ ನಿಲ್ದಾಣಗಳಲ್ಲೂ ದುಬಾರಿ ಪಾರ್ಕಿಂಗ್ ಶುಲ್ಕವನ್ನು ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ. ಮಂಗಳೂರು ನಿಲ್ದಾಣದಲ್ಲಿ ದುಬಾರಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಿರುವ ಘಟನೆಗೆ ಸಂಬಂಧಿಸಿ ಗುತ್ತಿಗೆ ವಹಿಸಿರುವ ಏಜೆನ್ಸಿಗೆ ನೋಟಿಸ್ ನೀಡಲಾಗಿದೆ. ಜತೆಗೆ ದಂಡವನ್ನೂ ವಿಧಿಸಲಾಗಿದೆ ಎಂದರು.

ಏಜೆನ್ಸಿಗೆ ಈಗಾಗಲೇ ಮೂರು ಬಾರಿ ನೋಟಿಸ್ ನೀಡಲಾಗಿದೆ. ಏಜೆನ್ಸಿಯು ತನ್ನ ವರ್ತನೆಯನ್ನು ಬದಲಿಸದಿದ್ದರೆ, ಇಂತಹ ತಪ್ಪು ಪುನರಾವರ್ತನೆಯಾದರೆ, ಪಾರ್ಕಿಂಗ್ ಶುಲ್ಕದ ಹೊಸ ನಿಯಮಾವಳಿಯಂತೆ ಟೆಂಡರ್ ಕರೆದು ಬೇರೆ ಕಂಪನಿಗಳಿಗೆ ಗುತ್ತಿಗೆ ನೀಡಲಾಗುವುದು ಎಂದು ಅವರು ಎಚ್ಚರಿಸಿದರು.


* ಸ್ವಚ್ಛ ನಿಲ್ದಾಣದ ಪ್ರಶಸ್ತಿ ಮತ್ತಷ್ಟು ಪ್ರೇರಣೆ

ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೇಶದಲ್ಲೇ ನಂಬರ್ ಒನ್
ಸ್ವಚ್ಛ ನಿಲ್ದಾಣ ಎಂಬ ಖ್ಯಾತಿ ಲಭಿಸಿದ್ದು, ಇದರಿಂದ ವಿಮಾನ ನಿಲ್ದಾಣದ ಕಾರ್ಯನಿರ್ವಹಣೆಗೆ ಮತ್ತಷ್ಟು ಪ್ರೇರಣೆ ದೊರಕಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್ ಹೇಳಿದರು.

ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ನಡೆಸಿದ ಸ್ವಚ್ಛತಾ ಸಮೀಕ್ಷೆಯಲ್ಲಿ ಸ್ವಚ್ಛತೆ ಹಾಗೂ ನಿರ್ವಹಣಾ ವಿಭಾಗದಲ್ಲಿ ಈ ಮೊದಲ ಸ್ಥಾನ ಲಭಿಸಿದೆ. ದ್ವಿತೀಯ ಸ್ಥಾನ ಕೇರಳದ ತಿರುವನಂತಪುರಂ ಹಾಗೂ ಅಸ್ಸಾಂನ ಗುವಾಹಟಿ ವಿಮಾನ ನಿಲ್ದಾಣಕ್ಕೆ ತೃತೀಯ ಸ್ಥಾನ ಲಭಿಸಿವೆ ಎಂದು ಅವರು ಹೇಳಿದರು.


ನೂತನ ಆಗಮನ ಸಭಾಂಗಣ ರಚನೆ
 ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನ ಸಭಾಂಗಣದ ವಿಸ್ತರಣೆ ಕಾಮಗಾರಿಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು. ಸುಮಾರು 132 ಕೋಟಿ ರೂ. ವೆಚ್ಚದಲ್ಲಿ 18 ತಿಂಗಳಲ್ಲಿ ಈ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಹೊಸ ಆಗಮನ ಸಭಾಂಗಣವು ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣಿಕರ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಿದೆ. ಪ್ರಸಕ್ತ ಇರುವ ಸಭಾಂಗಣದಲ್ಲಿ ವಿಮಾನ ಆಗಮಿಸಿದಾಗ 250 ಹಾಗೂ ಹೊಸ ಸಭಾಂಗಣದಲ್ಲಿ 500 ಮಂದಿ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಲಿದೆ. ಪ್ರಯಾಣಿಕರ ದಟ್ಟಣೆಯ ಹಿನ್ನೆಲೆಯಲ್ಲಿ ಸಭಾಂಗಣ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
   
2017-18ನೆ ಸಾಲಿನಲ್ಲಿ 23.5 ಲಕ್ಷ ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದಾರೆ. 2018-19ನೆ ಸಾಲಿನಲ್ಲಿ 3 ಮಿಲಿಯನ್ ಪ್ರಯಾಣಿಕರ ಗುರಿಯನ್ನು ಹೊಂದಲಾಗಿದೆ. ದೇಶೀಯ, ವಿದೇಶಿ ಹಾಗೂ ವಾಣಿಜ್ಯ ವಿಮಾನಗಳು ಸೇರಿ ಒಟ್ಟು 40 ವಿಮಾನಗಳು ಪ್ರತಿನಿತ್ಯ ಹಾರಾಟ ನಡೆಸುತ್ತಿವೆ. ಸರಕು ಸಾಗಾಟದಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

ವಿಮಾನ ನಿಲ್ದಾಣದಲ್ಲಿ ಬಾಡಿಗೆ ಮಾಡುತ್ತಿರುವ ಟೂರಿಸ್ಟ್ ಕಾರು ಚಾಲಕರ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಪ್ರಯಾಣಿಕರೊಂದಿಗೆ ವರ್ತನೆ ನಡೆಸುವ ಬಗ್ಗೆ ತರಬೇತಿ ನೀಡಲಾಗಿದೆ. ನಗರದ ಶ್ರೀನಿವಾಸ ಶಿಕ್ಷಣ ಸಂಸ್ಥೆಯ ಜೊತೆಗೆ ಒಪ್ಪ ಂದ ನಡೆಸಲಾಗಿದ್ದು, ಅಲ್ಲಿನ ತಜ್ಞರು ಕ್ಯಾಬ್ ಹಾಗೂ ಕಾರು ಚಾಲಕರಿಗೆ ಅಲ್ಲದೆ ಸುಂಕ ವಸೂಲಿ ಸಿಬ್ಬಂದಿಗಳೂ ತರಬೇತಿಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News