‘ಸಾಮಾಜಿಕ ನ್ಯಾಯ ಒದಗಿಸಿದ ಮಹಾನ್‌ಚೇತನ ಜಗಜೀವನರಾಂ’

Update: 2018-04-05 12:19 GMT

ಉಡುಪಿ, ಎ.5: ಸಮಾಜದಲ್ಲಿದ್ದ ಸಾಮಾಜಿಕ ಅಸಮಾನತೆಯನ್ನು ತೊಡೆದು, ಎಲ್ಲಾ ಜಾತಿ ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸಲು ಶ್ರಮಿಸಿದ ಮಹಾಚೇತನ ಡಾ.ಬಾಬು ಜಗಜೀವನರಾಂ. ಇವರನ್ನು ನೆನೆಸುವುದು ಎಲ್ಲರ ಕರ್ತವ್ಯ ಎಂದು ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಹೇಳಿದ್ದಾರೆ.

ಗುರುವಾರ ಇಂದ್ರಾಳಿಯ ಕೊರಗರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲೆಯ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬಾಬು ಜಗಜೀವನರಾಂ ಅವರ 111ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅನುರಾಧ ಮಾತನಾಡಿ, ರಾಜಕಾರಣದಲ್ಲಿ ಅಜಾತಶತ್ರುವಾಗಿದ್ದ ಡಾ.ಬಾಬು ಜಗಜೀವನರಾಂ, ದೇಶದಲ್ಲಿ ಹಸಿರು ಕ್ರಾಂತಿಯ ಹರಿಕಾರರಾಗಿ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವಲ್ಲಿ ಶ್ರಮಿಸಿದ್ದರು ಎಂದರು.

ಡಾ.ಬಾಬು ಜಗಜೀವನರಾಂ ಅವರ ವ್ಯಕ್ತಿತ್ವ ಮತ್ತು ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದ ಮಂಗಳೂರು ವಿವಿಯ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಉದಯ್ ಬಾರ್ಕೂರು ಮಾತನಾಡಿ, ಗಾಂಧೀಜಿ ಅವರ ರಾಮರಾಜ್ಯದ ಕನಸಿನ ಅನುಷ್ಠಾನಕ್ಕೆ ಶ್ರಮಿಸಿದ್ದ ಬಾಬು ಜಗಜೀವನರಾಂ, ಕೇಂದ್ರದಲ್ಲಿ 25 ವರ್ಷಗಳ ಸುಧೀರ್ಘ ಕಾಲ ವಿವಿಧ ಖಾತೆಗಳ ಮಂತ್ರಿಯಾಗಿದ್ದರು. ತಾವು ಕಾರ್ಯ ನಿರ್ವಹಿಸಿದ ಎಲ್ಲಾ ಖಾತೆಗಳಲ್ಲೂ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಿದ್ದರು ಎಂದರು.

ಕಾರ್ಮಿಕರು ಮತ್ತು ರೈತರ ಹಿತಾಸಕ್ತಿಗಾಗಿ ಅವರು ಅಂದು ರೂಪಿಸಿದ್ದ ಹಲವು ಕಾನೂನುಗಳು ಇಂದಿಗೂ ತಿದ್ದುಪಡಿಯಾಗದೆ ಜಾರಿಯಲ್ಲಿವೆ ಎಂಬುದು ಅವರ ದೂರದೃಷ್ಠಿತ್ವವನ್ನು ಸಾರುತ್ತದೆ. ದುರ್ಬಲರ ಏಳಿಗೆಗಾಗಿ ಶ್ರಮಿಸಿದ ಬಾಬು, ವರ್ಗ, ಜಾತಿ ಮುಕ್ತ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಪ್ರಬುದ್ಧ ಓದುಗರಾಗಿದ್ದ ಅವರು ಜಗತ್ತಿನ ಸುಮಾರು 5000ಕ್ಕೂ ಅಧಿಕ ಉತ್ಕಷ್ಟ ಕೃತಿಗಳನ್ನು ಸಂಗ್ರಹಿಸಿದ್ದರು ಎಂದು ವಿವರಿಸಿದರು.

ದೇಶದಲ್ಲಿ ಜಾತಿ ಮುಕ್ತ ಸಮಾಜ ನಿರ್ಮಿಸಿ, ನವಭಾರತ ನಿರ್ಮಾಣದ ಕನಸನ್ನು ಕಂಡಿದ್ದರು. ಅವರು ಕೇವಲ ದಲಿತ ನಾಯಕ ಮಾತ್ರವಲ್ಲದೇ ಎಲ್ಲಾ ವರ್ಗಕ್ಕೂ ಸಲ್ಲುವ ವ್ಯಕ್ತಿಯಾಗಿದ್ದರು. ಅವರ ಚಿಂತನೆ ಬರಹಗಳನ್ನು ವಿದ್ಯಾರ್ಥಿ ಸಮುದಾಯ ಅಧ್ಯಯನ ಮಾಡಬೇಕಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ವೌಲ್ಯಗಳು ಕಾಣೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ದೇಶಕ್ಕೆ ಡಾ. ಬಾಬು ಜಗಜೀವನರಾಂ ಅವರಂತಹ ನಾಯಕರ ಅವಶ್ಯಕತೆಯಿದೆ ಎಂದು ಡಾ.ಉದಯ್ ಬಾರ್ಕೂರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ , ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೋಹನ್ ರಾಜ್ ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಭುಜಬಲಿ ಪಾಸಾನೆ ಸ್ವಾಗತಿಸಿದರು. ಸಹಾಯಕ ನಿದೇಶರ್ಕ ರಮೇಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News