ದ.ಕ. ಜಿಲ್ಲೆ: ಆಧಾರ್ ಕಾರ್ಡ್ ನೋಂದಣಿಗೆ ಪರದಾಟ

Update: 2018-04-06 06:48 GMT

ಮಂಗಳೂರು, ಎ.5: ಪ್ರಜೆಗಳೇ ನಾಡಿನ ಪ್ರಭುಗಳು... ಈ ಘೋಷವಾಕ್ಯ ಇದೀಗ ಗಿಲೀಟಿನ ರೂಪ ತಾಳುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಈಗ ಬದುಕಲು ಅತಿಮುಖ್ಯ ಎಂಬಂತಿರುವ ‘ಆಧಾರ್ ಕಾರ್ಡ್’ ನೋಂದಣಿ ಮಾಡಿಸಿಕೊಳ್ಳಲು ಪ್ರಜೆಗಳು ಪಡುವುದು ಪರದಾಟವೇ ಸರಿ. ದ.ಕ.ಜಿಲ್ಲೆಯಲ್ಲಂತೂ ಈ ಅಧ್ವಾನ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಾಗಾಗಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಟೋಕನ್ ನೀಡುವ ದಿನ ಮುಂಜಾನೆಯ ವೇಳೆಗೆ ಚುಮುಚುಮು ಚಳಿಯನ್ನೂ ಲೆಕ್ಕಿಸದೆ ಜನರು ಆಯ್ದ ಪ್ರಮುಖ ಬ್ಯಾಂಕ್ ಶಾಖೆಗಳ ಸಹಿತ ಆಧಾರ್ ನೋಂದಣಿ ಕೇಂದ್ರದಲ್ಲಿ ಸಾಲುಗಟ್ಟಿ ನಿಂತಿರುತ್ತಾರೆ. ಕೆಲವರಿಗೆ ಟೋಕನ್ ಸಿಕ್ಕರೆ ಇನ್ನು ಕೆಲವರು ಟೋಕನ್ ಸಿಗದೆ ಸಪ್ಪೆ ಮುಖ ಹಾಕಿ ಬರಿಗೈಯಲ್ಲಿ ಮರಳುವ ದೃಶ್ಯವೂ ಸಾಮಾನ್ಯವಾಗಿದೆ.

ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕಾದರೂ ಆಧಾರ್ ಬೇಕು, ರೇಶನ್ ಕಾರ್ಡ್ ಮಾಡಿಸಲೂ ಆಧಾರ್ ಬೇಕು, ಆದಾಯ ಪ್ರಮಾಣಪತ್ರ ಮಾಡಿಸಿಕೊಳ್ಳಲೂ ಆಧಾರ್ ಬೇಕು, ಶಾಲಾ-ಕಾಲೇಜುಗಳಿಗೆ ಸೇರ್ಪಡೆ ಗೊಳಿಸಲೂ ಆಧಾರ್ ಬೇಕು. ವಿದ್ಯಾರ್ಥಿ ವೇತನ ಸಹಿತ ಸರಕಾರದ ಎಲ್ಲಾ ಸವಲತ್ತುಗಳನ್ನೂ ಪಡೆಯಲು ಆಧಾರ್ ಬೇಕೇ ಬೇಕು. ಆಧಾರ್ ಕಾರ್ಡ್ ಇಲ್ಲ ದಿದ್ದರೆ ದೇಶದ ಪ್ರಜೆಯೇ ಅಲ್ಲ ಎಂಬಂತಹ ವಾತಾ ವರಣ ಸೃಷ್ಟಿಯಾಗುತ್ತಿದೆ. ಹಾಗಾಗಿ ಜನರು ಮುಗಿಬಿದ್ದು ಆಧಾರ್ ಮಾಡಿಸಿಕೊಳ್ಳುತ್ತಿದ್ದಾರೆ.

ದ.ಕ.ಜಿಲ್ಲೆಯಲ್ಲಿ 2018ರ ಮಾರ್ಚ್‌ಗೆ ಅಂದಾಜು 22,84,124 ಜನಸಂಖ್ಯೆ ಇದೆ. ಆ ಪೈಕಿ 21,35,647 ಮಂದಿ ಆಧಾರ್ ಮಾಡಿಸಿಕೊಂಡಿದ್ದಾರೆ. ಅಂದರೆ ಶೇ.93.5 ಸಾಧನೆಯಾಗಿದೆ. ಇನ್ನು 1,48,477 ಮಂದಿ ಆಧಾರ್ ಮಾಡಿಸಿಕೊಳ್ಳಲು ಬಾಕಿ ಇದೆ. ಅಂದರೆ ಶೇ. 6.5ರಷ್ಟು ಮಾತ್ರ ಆಧಾರ್ ಮಾಡಿಸಿ ಕೊಳ್ಳಲು ಬಾಕಿ ಇದೆ. ಮಂಗಳೂರು ತಾಲೂಕಿನಲ್ಲಿ 11,76,444 ಜನ ಸಂಖ್ಯೆಯಿದ್ದು, 9,65,301 ಮಂದಿ ಆಧಾರ್ ಮಾಡಿ ಸಿದ್ದಾರೆ. ಬಂಟ್ವಾಳದಲ್ಲಿ 4,10,997 ಜನ ಸಂಖ್ಯೆಯಿದ್ದರೆ 4,39,363 ಮಂದಿ ಆಧಾರ್ ಮಾಡಿ ಸಿದ್ದಾರೆ. ಪುತ್ತೂರಿನಲ್ಲಿ 2,92,425 ಜನಸಂಖ್ಯೆಯಿದ್ದು, 2,98,356 ಮಂದಿ ಆಧಾರ್ ಮಾಡಿಸಿದ್ದಾರೆ. ಬೆಳ್ತಂಗಡಿಯಲ್ಲಿ 2,59,828 ಜನಸಂಖ್ಯೆಯಿದ್ದು, 2,84,379 ಮಂದಿ ಆಧಾರ್ ಮಾಡಿಸಿದ್ದಾರೆ. ಸುಳ್ಯ ದಲ್ಲಿ 1,44,430 ಜನಸಂಖ್ಯೆಯಿದ್ದು, 1,48,248 ಮಂದಿ ಆಧಾರ್ ಮಾಡಿಸಿದ್ದಾರೆ. ಅಂದರೆ ಮಂಗಳೂರು ಹೊರತು ಪಡಿಸಿದರೆ ಉಳಿದ ನಾಲ್ಕು ತಾಲೂಕುಗಳಲ್ಲೂ ಕೂಡ ಅಲ್ಲಿನ ಜನಸಂಖ್ಯೆಗಿಂತ ಜಾಸ್ತಿ ಆಧಾರ್ ನೋಂದಣಿ ಆಗಿದೆ. ಅಂದರೆ, ಆ ತಾಲೂಕಿನಲ್ಲಿ ಹೊರಗಡೆಯಿಂದ ಬಂದವರೂ ಕೂಡ ನೋಂದಣಿ ಮಾಡಿಸಿರುವುದು ಗಮನಿಸಬೇಕಾದ ಅಂಶವಾಗಿದೆ.

ಜಿಲ್ಲೆಯ 17 ನಾಡ ಕಚೇರಿಗಳು, 11 ಕರ್ನಾಟಕ ವನ್ ಕೇಂದ್ರಗಳು, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ದಲ್ಲಿ 4, ಸಿಎಸ್‌ಸಿ(ಕಾಮನ್ ಸರ್ವಿಸ್ ಸೆಂಟರ್) ಯಲ್ಲಿ 2, ಹಾಗೂ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳ 10 ಶಾಖೆಗಳ ಸಹಿತ 44 ಕೇಂದ್ರಗಳಲ್ಲಿ ಆಧಾರ್ ನೋಂದಣಿ ಮಾಡಿಸಿಕೊಳ್ಳಲಾಗುತ್ತದೆ. ಆಧಾರ್ ಮಾಡಿಸಿಕೊಳ್ಳಲು ಬಾಕಿಯಿರುವ ಜನಸಂಖ್ಯೆಗೆ ಅನು ಗುಣವಾಗಿ ಈ 44 ಆಧಾರ್ ನೋಂದಣಿ ಕೇಂದ್ರ ಸಾಕು. ಹಾಗಿದ್ದರೂ ಕೂಡ ಆಧಾರ್ ನೋಂದಣಿ ಕೇಂದ್ರಗಳಲ್ಲಿ ಜನರು ಸಾಲುಗಟ್ಟಿ ನಿಲ್ಲತ್ತಿದ್ದಾರೆ.

ಹೀಗೆ ಸಾಲುಗಟ್ಟಿ ನಿಲ್ಲುವವರು ಹೊಸ ನೋಂದಣಿ ಮಾಡುವವರಲ್ಲ. ಹೆಸರು ಅಥವಾ ವಿಳಾಸ, ಮನೆ ಸಂಖ್ಯೆ ಬದಲಾವಣೆ, ಜನನ ದಿನಾಂಕ ಇತ್ಯಾದಿ ತಿದ್ದುಪಡಿ ಮಾಡುವವರೇ ಅಧಿಕ ಮಂದಿ ಇದೀಗ ಸಾಲುಗಟ್ಟಿ ನಿಲ್ಲುತ್ತಾರೆ. ಜನರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎಂಬಂತೆ ಆಗಾಗ ವಾಸ್ತವ್ಯ ಬದ ಲಿಸುವುದು ಸಾಮಾನ್ಯವಾ ಗಿದ್ದು, ಅದಕ್ಕೆ ಅನುಗುಣವಾಗಿ ಆಧಾರ್‌ನಲ್ಲಿ ತಿದ್ದುಪಡಿ ಮಾಡಲು ಧಾವಿಸುತ್ತಾರೆ. ಹಾಗಾಗಿ ಈ ಕೇಂದ್ರಗಳಲ್ಲಿ ಸದಾ ಜನಜಂಗುಳಿ ಇರುವುದು ಸಹಜವಾಗಿದೆ.

ಸಾಮಾನ್ಯವಾಗಿ ಇಂತಿಂಥ ದಿನಾಂಕದಂದು ಟೋಕನ್ ಕೊಡಲಾಗುವುದು ಎಂದು ಆಧಾರ್ ನೋಂದಣಿ ಕೇಂದ್ರದಲ್ಲಿ ಸೂಚನೆ ಹಾಕಲಾಗುತ್ತದೆ. ಅದರಂತೆ ಆ ದಿನ ಮುಂಜಾನೆಯೇ ಜನರು ಸಾಲು ಗಟ್ಟಿ ನಿಲ್ಲುತ್ತಾರೆ. ಇನ್ನು ಬ್ಯಾಂಕ್‌ಗಳಲ್ಲಿ ದಿನಕ್ಕೆ ಕನಿಷ್ಠ 20 ಮಂದಿಗೆ ಆಧಾರ್ ನೋಂದಣಿ ಮಾಡಲಾಗುತ್ತದೆ. ಆಯಾ ದಿನ ಮುಂಜಾನೆಯೇ ಎದ್ದು ಬ್ಯಾಂಕ್‌ನ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಜನರು ಒಂದಿಡೀ ದಿನ ಕಾದು ಆಧಾರ್ ನೋಂದಣಿ ಅಥವಾ ತಿದ್ದುಪಡಿ ಮಾಡಿಸುತ್ತಾರೆ. ಬ್ಯಾಂಕ್‌ಗಳ ಮುಂದಿನ ಸರತಿ ಸಾಲಿನಲ್ಲಿ 20ಕ್ಕಿಂತ ಜನರು ಅಧಿಕವಿದ್ದರೆ ಮರುದಿನ ಮುಂಜಾನೆ ಸಾಲುಗಟ್ಟಿ ನಿಲ್ಲುವುದು ಅನಿವಾರ್ಯ. ಕೆಲವರಿಗೆ ಮೂರ್ನಾಲ್ಕು ಬಾರಿಯ ಪ್ರಯತ್ನದ ಬಳಿಕ ಟೋಕನ್ ಸಿಕ್ಕಿದ ಉದಾಹರಣೆಯೂ ಇದೆ. ಬ್ರೋಕರ್‌ಗಳ ಹಾವಳಿ:

ಬ್ಯಾಂಕ್‌ನಲ್ಲಿ ಬ್ರೋಕರ್ ಗಳ ಹಾವಳಿ ಇಲ್ಲ. ಆದರೆ ‘ನಾಡ ಕಚೇರಿ’ ಮತ್ತು ‘ಕರ್ನಾಟಕ ವನ್’ನಲ್ಲಿ ಬ್ರೋಕರ್‌ಗಳು ತಮ್ಮ ಕೈ ಚಳಕ ಪ್ರದರ್ಶಿಸುತ್ತಾರೆ. ತುರ್ತಾಗಿ ಆಧಾರ್ ಬೇಕಾದವರು ಈ ಕೇಂದ್ರಗಳ ಮುಂದೆ ಸುಳಿದಾ ಡಿದಾಗ ನಗುಮುಖದಲ್ಲೇ ಬ್ರೋಕರ್‌ಗಳು ಹಾಜ ರಾಗುತ್ತಾರೆ. ‘ಆಧಾರ್‌ನ ಟೋಕನ್ ಮುಗಿದಿದೆ. 2 ತಿಂಗಳ ಬಳಿಕ ಬಂದರೆ ಆಧಾರ್ ಮಾಡಿಸಬಹುದು. ಇನ್ನು ನಿಮಗೆ ತುರ್ತಾಗಿ ಆಧಾರ್ ಬೇಕಿದ್ದರೆ 500 ರೂ. ಕೊಡಿ. ಟೋಕನ್ ಕೊಡುತ್ತೇನೆ’ ಎಂದು ಭರವಸೆ ನೀಡುತ್ತಾರೆ. ಮಂಗಳೂರು, ತೊಕ್ಕೊಟ್ಟು, ತಲಪಾಡಿ ಹೀಗೆ 10-20 ಕಿ.ಮೀ. ದೂರದಿಂದ ಬರುವವರು ಬರಿಗೈಯಲ್ಲಿ ಮರಳುವ ಬದಲು 500 ರೂ.ಕೊಟ್ಟು ಆಧಾರ್ ಮಾಡಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಇನ್ನು ಬ್ರೋಕರ್‌ಗಳ ಕೈಗೆ ಸಿಗದೆ ನೇರ ಆಧಾರ್ ಕೇಂದ್ರದ ಸಿಬ್ಬಂದಿಯ ಬಳಿ ತೆರಳಿದರೆ ಟೋಕನ್ ಮುಗಿದಿದೆ. ತುರ್ತಾಗಿ ಬೇಕಿದ್ದರೆ ಮೊಬೈಲ್ ಸಂಖ್ಯೆಯೊಂದನ್ನು ನೀಡಿ ಇವರನ್ನು ಸಂಪರ್ಕಿಸಿ ಎನ್ನುತ್ತಾರೆ. ಈ ಸಂಖ್ಯೆಯು ಬ್ರೋಕರ್‌ಗಳದ್ದಾಗಿದ್ದು, ಆಧಾರ್ ಕೇಂದ್ರದ ಸಿಬ್ಬಂದಿ ವರ್ಗ ಮತ್ತು ಈ ಬ್ರೋಕರ್‌ಗಳ ನಡುವಿನ ಮಧ್ಯೆ ಒಪ್ಪಂದಕ್ಕೆ ಇದು ಸಾಕ್ಷಿಯಾಗಿದೆ.

ನಾನು ನನ್ನ ಒಂದೂವರೆ ವರ್ಷದ ಮಗುವಿನ ಆಧಾರ್ ಕಾರ್ಡ್ ಮಾಡಿಸಲು ಇತ್ತೀಚೆಗೆ ಮಂಗಳೂರಿಗೆ ಹೋಗಿದ್ದೆ. ಬ್ಯಾಂಕ್‌ನಲ್ಲೂ ಆಧಾರ್ ಮಾಡಿಸಲಾ ಗುತ್ತದೆ ಎಂಬ ಮಾಹಿತಿಯ ಮೇರೆಗೆ ಒಂದೆ ರಡು ಬ್ಯಾಂಕ್‌ಗೆ ಅಲೆದೆ. ಒಂದು ಬ್ಯಾಂಕ್‌ನವರು ಈವತ್ತಿನ ಟೋಕನ್ ಮುಗಿಯಿತು. ನಾಳೆ ಬನ್ನಿ. ಮೊದಲು ಬಂದವರಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದರು. ಬಳಿಕ ಇನ್ನೊಂದು ಬ್ಯಾಂಕ್‌ಗೆ ಹೋದೆ. ಅಲ್ಲಿ ಮಕ್ಕಳ ಆಧಾರ್ ಮಾಡಿಸುವುದಿಲ್ಲ ಎಂದರು. ನಂತರ ಮಂಗಳೂರಿನ ಮಿನಿ ವಿಧಾನಸೌಧಕ್ಕೆ ತೆರಳಿದೆ. ಅಲ್ಲೂ ಟೋಕನ್ ಮುಗಿದಿದೆ. ನಿರಾ ಶೆಯಿಂದ ಮರಳಿ ಬರು ವಾಗ ಒಬ್ಬರು ಬಂದು 500 ರೂ. ಕೊಟ್ಟರೆ ಟೋಕನ್ ಕೊಡುತ್ತೇನೆ. ಇವತ್ತೇ ಆಧಾರ್ ನೋಂದಣಿ ಮಾಡಿಸಿ ಹೋಗಿ ಎಂದರು. ಮಂಗಳೂರಿನಿಂದ ನನ್ನ ಮನೆಗೆ ಸುಮಾರು 25 ಕಿ.ಮೀ. ದೂರವಿದೆ. ಇನ್ನೊಮ್ಮೆ ಈ ಮಗುವನ್ನು ಎತ್ತಿಕೊಂಡು ಬರುವುದಕ್ಕಿಂತ 500 ರೂ. ಕೊಟ್ಟು ಟೋಕನ್ ಪಡೆದು ಆಧಾರ್ ನೋಂದಣಿ ಮಾಡಿಸಿದೆ.

ಸಾಜಿದಾ, ಕೊಣಾಜೆ

ಜಿಲ್ಲೆಯ 17 ನಾಡಕಚೇರಿ, 11 ಕರ್ನಾಟಕ ವನ್, 4 ಜಿಲ್ಲಾಧಿ ಕಾರಿಗಳ ಕಚೇರಿ ಸಂಕೀರ್ಣ, 2 ಸಿಎಸ್‌ಸಿ ಹಾಗೂ 10 ಬ್ಯಾಂಕ್ ಶಾಖೆಗಳಲ್ಲಿ ಸದ್ಯ ನೋಂದಣಿ ಕೇಂದ್ರ ಕಾರ್ಯಾಚರಿಸಲಾ ಗುತ್ತಿದೆ. ಕೇಂದ್ರ ಸರಕಾರವು ಜಿಲ್ಲೆಯ 50 ಬ್ಯಾಂಕ್ ಶಾಖೆಗಳಲ್ಲಿ ನೋಂದಣಿ ಕೇಂದ್ರ ತೆರೆಯಲು ಸೂಚಿಸಿದೆ. ಅದರಂತೆ 10 ಕಡೆ ತೆರೆಯಲಾಗಿದೆ. ಇನ್ನೂ 40 ಬ್ಯಾಂಕ್‌ಗಳಲ್ಲಿ ಕೇಂದ್ರ ತೆರೆಯಲು ಬಾಕಿ ಇದೆ. ಅಂಚೆ ಕಚೇರಿ ಗಳಲ್ಲೂ ಕೂಡ ನೋಂದಣಿ ಕೇಂದ್ರ ತೆರೆಯುವ ಪ್ರಕ್ರಿಯೆ ನಡೆಯುತ್ತಿದೆ. ಆಧಾರ್ ನೋಂದಣಿ ಕೇಂದ್ರಗಳಲ್ಲಿ ಟೋಕನ್ ಅವಧಿ ಮುಗಿದ ಬಳಿಕ ಕೊಡಲಾಗುತ್ತದೆ. ಅಲ್ಲಿ ಬ್ರೋಕರ್‌ಗಳ ಹಾವಳಿಯಿರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು.

ನರೇಂದ್ರ, ಜಿಲ್ಲಾ ಆಧಾರ್ ನೋಂದಣಿ ಮೇಲ್ವಿಚಾರಕ

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News