ಚೆಂಡನ್ನು ಬೌಂಡರಿಗೆ ದಬ್ಬುವ ಕ್ರಿಕೆಟಿಗರ ನೆಚ್ಚಿನ ಬ್ಯಾಟ್‌ಗಳ ಬಗ್ಗೆ ನಿಮಗೆ ಗೊತ್ತೇ...?

Update: 2018-04-08 12:28 GMT

ಕ್ರಿಕೆಟಿಗರು ದಪ್ಪವಾದ, ಭಾರವಾದ ಬ್ಯಾಟ್‌ಗಳನ್ನು ಬಳಸುತ್ತಿದ್ದ ದಿನಗಳು ಈಗ ಇತಿಹಾಸದ ಪುಟಗಳಿಗೆ ಸೇರಿವೆ. ಕ್ರಿಕೆಟ್ ಮೈದಾನದಲ್ಲಿ ಈಗ ಕ್ರಿಕೆಟಿಗರ ಕೌಶಲ ಪ್ರದರ್ಶನಕ್ಕೆ ನಾಜೂಕಾದ ಬ್ಯಾಟ್‌ಗಳು ಬಳಕೆಯಾಗುತ್ತಿವೆ. ಐಪಿಎಲ್‌ನಲ್ಲಿ ಆಡುತ್ತಿರುವ ಕೆಲವು ಕ್ರಿಕೆಟ್ ಕಲಿಗಳು ಬಸುತ್ತಿರುವ ಬ್ಯಾಟ್‌ಗಳ ಕುರಿತು ಮಾಹಿತಿಗಳಿಲ್ಲಿವೆ....

ವಿರಾಟ್ ಕೊಹ್ಲಿ

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಗ್ರೇಡ್-ಎ ಇಂಗ್ಲೀಷ್ ವಿಲ್ಲೋ ಕಟ್ಟಿಗೆಯಿಂದ ತಯಾರಿಸಲಾದ ಬ್ಯಾಟ್‌ಗಳನ್ನು ಬಳಸುತ್ತಿದ್ದು, 1.1ರಿಂದ 1.23 ಕೆ.ಜಿ.ಯಷ್ಟು ಭಾರವಿರುತ್ತವೆ. ಕರ್ವ್ಡ್ ಬ್ಲೇಡ್ ಹೊಂದಿರುವ ಈ ಬ್ಯಾಟ್‌ಗಳು 38ರಿಂದ 42 ಮಿ.ಮೀ.ದಪ್ಪವಿರುತ್ತವೆ. ಕೊಹ್ಲಿ ಬಳಸುವ ಈ ಬ್ಯಾಟ್‌ಗಳಿಗೆ 17,000 ರೂ.ಗಳಿಂದ 23,000 ರೂ.ವರೆಗೂ ಬೆಲೆಯಿದೆ. ಬ್ಯಾಟ್‌ನ ಮೇಲ್ಮೈಯಲ್ಲಿರುವ ಗ್ರೇನ್‌ಗಳು ಅದಕ್ಕೆ ಬಳಸಲಾದ ವಿಲ್ಲೋ ಕಟ್ಟಿಗೆಯ ಗುಣಮಟ್ಟವನ್ನು ಸೂಚಿಸುತ್ತವೆ ಮತ್ತು ಈ ಗ್ರೇನ್‌ಗಳ ಸಂಖ್ಯೆಯನ್ನು ಆಧರಿಸಿ ಬ್ಯಾಟ್‌ನ ಬೆಲೆಯನ್ನು ನಿಗದಿಗೊಳಿಸಲಾಗುತ್ತದೆ. ಕೊಹ್ಲಿ ಬಳಸುವ ಬ್ಯಾಟ್‌ಗಳು 8ರಿಂದ 12 ಗ್ರೇನ್‌ಗಳನ್ನು ಹೊಂದಿರುತ್ತವೆ.

ಕ್ರಿಸ್ ಗೇಲ್

 ಸ್ಪಾರ್ಟನ್ ಸಿಜಿ 'ದಿ ಬಾಸ್' ಸ್ಫೋಟಕ ಇನಿಂಗ್ಸ್‌ಗಾಗಿ ಕ್ರಿಸ್ ಗೇಲ್ ಅವರ ನೆಚ್ಚಿನ ಬ್ಯಾಟ್ ಆಗಿದೆ. ಈ ಕರಕುಶಲ ನಿರ್ಮಿತ ಬ್ಯಾಟ್ ದೊಡ್ಡದಾದ ಬೋ, ಹಗುರ ಪಿಕಪ್,ಗರಿಷ್ಠ 40 ಮಿ.ಮೀ.ವರೆಗೆ ಚಾಚಿಕೊಂಡಿರುವ ಅಂಚುಗಳು ಮತ್ತು 12 ಪೀಸ್ ಕೇನ್ ಹ್ಯಾಂಡಲ್ ಹೊಂದಿರುತ್ತವೆ. ಈ ಬ್ಯಾಟ್‌ಗಳು 1.1ರಿಂದ 1.3 ಕೆ.ಜಿ.ವರೆಗೆ ತೂಗುತ್ತವೆ.

ಸುರೇಶ್ ರೈನಾ

ಚೆನ್ನೈ ಸೂಪರ್ ಕಿಂಗ್ಸ್‌ನ ದಾಂಡಿಗ ಸುರೇಶ ರೈನಾ ವಿಲ್ಲೋ ಬ್ಯಾಟ್‌ಗಳನ್ನು ಬಹುವಾಗಿ ಇಷ್ಟಪಡುತ್ತಾರೆ. ಟಿ-20 ಪಂದ್ಯಾವಳಿಗಳಲ್ಲಿ ಅವರು ಸ್ಯಾನ್ಸ್‌ಪರೀಲ್ಸ್ ಗ್ರೀನ್‌ಲ್ಯಾಂಡ್ಸ್ ಬ್ಯಾಟ್‌ಗಳನ್ನು ಬಳಸುತ್ತಾರೆ. ಇವುಗಳ ಅಂಚುಗಳು ಸಾಮಾನ್ಯವಾಗಿ 37ರಿಂದ 41 ಮಿ.ಮೀ.ದಪ್ಪವಾಗಿದ್ದು, ಸಮತೋಲನ ಮತ್ತು ತೂಕ ಪರಿಪೂರ್ಣವಾಗಿ ಹಂಚಿಕೆ ಯಾಗಿರುತ್ತವೆ.

ಎಂ.ಎಸ್.ಧೋನಿ

 ಮಹೇಂದ್ರ ಸಿಂಗ್ ಧೋನಿ ಬಳಸುವ ತನ್ನದೇ ಆದ ವಿಶಿಷ್ಟ ಸ್ಪಾರ್ಟನ್ ಎಂಎಸ್‌ಡಿ 7 ಸೀಮಿತ ಆವೃತ್ತಿಯ ಬ್ಯಾಟ್‌ಗಳು 1.1ರಿಂದ 1.25 ಕೆ.ಜಿ.ಭಾರವಿರುತ್ತವೆ. ಉತ್ತಮ ಸಮತೋಲನ ಮತ್ತು ಶಕ್ತಿಗಾಗಿ ಅವರ ಬ್ಯಾಟ್‌ಗಳು ನೈನ್ ಪೀಸ್ ಕೇನ್ ಹ್ಯಾಂಡಲ್ ಹೊಂದಿರುತ್ತವೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ ಬಳಸುವ ಬ್ಯಾಟ್‌ಗಳು ಉದ್ದನೆಯ ಸ್ಪೈನ್ ಹೊಂದಿದ್ದು, ಸ್ವಲ್ಪ ಪ್ರಮಾಣದಲ್ಲಿ ಬಾಗಿರುತ್ತವೆ. 1.2ರಿಂದ 1.3 ಕೆ.ಜಿ.ತೂಕ ಹೊಂದಿರುವ ಈ ಬ್ಯಾಟ್‌ಗಳ ಹ್ಯಾಂಡಲ್‌ಗಳು ಹೆಚ್ಚಿನ ನಿಯಂತ್ರಣ ಮತ್ತು ಅನುಕೂಲಕ್ಕಾಗಿ ಸೆಮಿ ಓವಲ್ ಆಕಾರವನ್ನು ಹೊಂದಿರುತ್ತವೆ.

ಎಬಿ ಡಿ ವಿಲಿಯರ್ಸ್

ದಕ್ಷಿಣ ಆಫ್ರಿಕಾದ ಈ ಕ್ರಿಕೆಟಿಗ ಶಕ್ತಿಶಾಲಿ ಹೊಡೆತಗಳಿಗಾಗಿ ಅತ್ಯುತ್ಕೃಷ್ಟ ಇಂಗ್ಲೀಷ್ ವಿಲ್ಲೋದಿಂದ ಮಾಡಲಾದ ಕೂಕಾಬುರಾಸ್ ಕಹುನಾ ಬ್ಯಾಟ್‌ಗಳನ್ನು ಬಳಸುತ್ತಾರೆ. ಇವು 1.1ರಿಂದ 1.4 ಕೆ.ಜಿ.ತೂಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News