×
Ad

ಕಾಮನ್‌ವೆಲ್ತ್ ಗೇಮ್ಸ್: ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆ ಚಿನ್ನ

Update: 2018-04-08 19:25 IST

ಗೋಲ್ಡ್‌ಕೋಸ್ಟ್,ಎ.8: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಟೇಬಲ್ ಟೆನಿಸ್ ತಂಡ ಫೈನಲ್‌ನಲ್ಲಿ ಸಿಂಗಾಪುರ ವಿರುದ್ಧ 3-1 ಗೆಲುವು ದಾಖಲಿಸಿ ಐತಿಹಾಸಿಕ ಚಿನ್ನ ಜಯಿಸಿದೆ. ಭಾರತದ ಖಾತೆಗೆ ರವಿವಾರ ಮೂರನೇ ಚಿನ್ನವನ್ನು ಟೇಬಲ್ ಟೆನಿಸ್ ತಂಡ ಜಮೆ ಮಾಡಿದೆ.

ಎರಡನೇ ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಫೈನಲ್ ತಲುಪಿದ್ದ ಭಾರತದ ಮಹಿಳೆಯರ ಟೇಬಲ್ ಟೆನಿಸ್ ತಂಡ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

2010ರಲ್ಲಿ ದಿಲ್ಲಿಯಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ತಂಡ ಫೈನಲ್ ತಲುಪಿತ್ತು.

    ಈ ಬಾರಿ ಮಾನಿಕಾ ಬಾತ್ರಾ ಮಧುರಿಕಾ ಪಾಟ್ಕರ್ ಮತ್ತು ಮೌಮಾ ದಾಸ್ ಅವರನ್ನು ಒಳಗೊಂಡ ಭಾರತದ ಮಹಿಳಾ ಟೇಬಲ್ ಟೆನಿಸ್ ತಂಡ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

 ವಿಶ್ವದ ನಂ.4 ಆಟಗಾರ್ತಿ ಟಿಯಾನ್ವಿ ಪೆಂಗ್ ವಿರುದ್ಧ 11-8, 8-11, 7-11, 11-9, 11-7 ಅಂತರದಲ್ಲಿ ಗೆಲುವು ದಾಖಲಿಸಿದ ಮಾನಿಕಾ ಬಾತ್ರಾ ಸಿಂಗಾಪುರ ವಿರುದ್ಧ ಭಾರತಕ್ಕೆ 1-0 ಮುನ್ನಡೆ ದೊರಕಿಸಿಕೊಟ್ಟರು.ಆದರೆ ಸಿಂಗಾಪುರದ ಮೆಂಗ್ಯು ಯು ಅವರು ಭಾರತದ ಮಧುರಿಕಾ ಪಾಟ್ಕರ್ ವಿರುದ್ಧ 13-11, 11-2, 11-6 ಅಂತರದಲ್ಲಿ ಗೆಲುವು ದಾಖಲಿಸಿ ಸಮಬಲ ಸಾಧಿಸಲು ನೆರವಾದರು.

 ಡಬಲ್ಸ್‌ನಲ್ಲಿ ವೌಮಾ ದಾಸ್ ಮತ್ತು ಮಧುರಿಕಾ ಪಾಟ್ಕರ್ ಅವರು ಯಿಹಾನ್ ರೆ ಮತ್ತು ಮೆಂಗ್ಯು ಯು ವಿರುದ್ಧ 11-7, 11-6, 8-11, 11-7 ಅಂತರದಲ್ಲಿ ಗೆಲುವು ಸಾಧಿಸಿ 2-1 ಮೇಲುಗೈ ಸಾಧಿಸಿದರು. ಅಂತಿಮವಾಗಿ ಮಾನಿಕಾ ಅವರು ಎರಡನೇ ಪಂದ್ಯದಲ್ಲಿ ಯಿಹಾನ ರೆ ವಿರುದ್ಧ 11-7, 11-4, 11-7 ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಭಾರತಕ್ಕೆ ಐತಿಹಾಸಿಕ ಚಿನ್ನ ತಂದು ಕೊಡುವಲ್ಲಿ ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News