ನಿರ್ವಸಿತ ಮಹಿಳೆಯ ಸುರಕ್ಷಿತ ಹೆರಿಗೆಗೆ ನೆರವಾದ ಪೊಲೀಸರು

Update: 2018-04-08 17:25 GMT

ಮುಂಬೈ,ಎ.8: ಶನಿವಾರ ರಾತ್ರಿ ಪೊಲೀಸರ ಗಸ್ತು ವಾಹನವೊಂದು ಇಲ್ಲಿಯ ಉಪನಗರ ಘಾಟಕೋಪರ್‌ನ ಮಹಿಳೆಯ ಪಾಲಿಗೆ ಆಪತ್ಬಾಂಧವನಾಗಿದೆ. ಈ ನಿರ್ವಸಿತ ಮಹಿಳೆ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದು, ಆಕೆಯನ್ನು ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸಿದ ಪೊಲೀಸ್ ವ್ಯಾನ್ ಸುರಕ್ಷಿತ ಹೆರಿಗೆಗೆ ಕಾರಣವಾಗಿದೆ.

 ಶನಿವಾರ ಮಧ್ಯರಾತ್ರಿ ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದಿದ್ದ ದೂರವಾಣಿ ಕರೆಯೊಂದು 20ರ ಹರೆಯದ ನಿರ್ವಸಿತ ಮಹಿಳೆಯೋರ್ವಳು ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದಾಳೆ ಮತ್ತು ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿತ್ತು. ಈ ಮಾಹಿತಿಯನ್ನು ತಕ್ಷಣವೇ ಪಂತನಗರ ಪೊಲೀಸ್ ಠಾಣೆಗೆ ತಲುಪಿಸಲಾಗಿತ್ತು. ಮಹಿಳಾ ಕಾನ್‌ಸ್ಟೇಬಲ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಗಸ್ತು ವಾಹನದಲ್ಲಿ ಘಾಟಕೋಪರ್(ಪೂರ್ವ)ನ ದೇರಾಸರ್ ಲೇನ್‌ಗೆ ಧಾವಿಸಿ ಮಹಿಳೆಯನ್ನು ಸಕಾಲದಲ್ಲಿ ರಾಜಾವಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ನಸುಕಿನ 1:17ರ ವೇಳೆಗೆ ಆಕೆ ಗಂಡುಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಪಂತನಗರ ಪೊಲೀಸ್ ಠಾಣೆಯ ಸೀನಿಯರ್ ಪೊಲೀಸ್ ಇನ್ಸ್‌ಪೆಕ್ಟರ್ ರೋಹಿಣಿ ಕಾಳೆ ಅವರು ರವಿವಾರ ಸುದ್ದಿಗಾರರಿಗೆ ತಿಳಿಸಿದರು.

ಮಹಿಳೆಯನ್ನು ಅಂಬಾ ಎಂದು ಗುರುತಿಸಲಾಗಿದ್ದು, ಆಕೆಯ ಕುಟುಂಬದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News