ಭೂಮಿ ಕೊರತೆ, ಸಮುದ್ರದಲ್ಲಿ ದಹನಕ್ಕೆ ಚೀನಾ ಆದ್ಯತೆ!

Update: 2018-04-08 18:24 GMT

ದೇಶದಲ್ಲಿ ಮಸಣದ ಕೊರತೆಯಿಂದ ಚೀನಾ ಸಮುದ್ರದಲ್ಲಿ ಶವಸಂಸ್ಕಾರ ನಡೆಸಲು ಆರಂಭಿಸಿದೆ. ಅದಕ್ಕಾಗಿ ಹಡಗೊಂದನ್ನು ವ್ಯವಸ್ಥೆ ಮಾಡಿದೆ. ‘ಗುವೋಬಿನ್-9’ ಹೆಸರಿನ ಈ ಹಡಗು ಮೊದಲ ಹಂತದಲ್ಲಿ ಎರಡು ಪಯಣ ನಡೆಸಿ 62 ಶವಗಳ ಸಂಸ್ಕಾರ ನಡೆಸಿದೆ. ಚೀನಾ ಮೊದಲ ಬಾರಿಗೆ ಶವಸಂಸ್ಕಾರಕ್ಕೆ ಈ ಹಡಗಿನ ವ್ಯವಸ್ಥೆ ಕಲ್ಪಿಸಿದೆ. ಈ ಹಡಗು ಈ ವಾರ ಉತ್ತರ ಬಂದರು ನಗರದಿಂದ ತೆರಳಿ ಶವಸಂಸ್ಕಾರ ನಡೆಸಿ ಹಿಂದಿರುಗಿತು. ಸಮುದ್ರದಲ್ಲಿ ಶವಸಂಸ್ಕಾರ ನಡೆಸುವುದು ಇದೇ ಮೊದಲಲ್ಲ. 1990ರಿಂದಲೇ ಇದು ಚಾಲ್ತಿಯಲ್ಲಿದೆ. ಆದರೆ, ಈ ಹಿಂದೆ ಶವಸಂಸ್ಕಾರಕ್ಕೆ ಸಾಂಪ್ರದಾಯಿಕ ದೋಣಿಗಳನ್ನು ಬಳಸಲಾಗುತ್ತಿತ್ತು. ಈಗ ಮೊದಲ ಬಾರಿಗೆ ಚಿತಾಭಸ್ಮವನ್ನು ಸಮುದ್ರದಲ್ಲಿ ವಿಸರ್ಜಿ ಸಲೆಂದೇ ಈ ಹಡಗನ್ನು ನಿಯೋಜಿಸಲಾಗಿದೆ. ‘ಗುವೋಬಿನ್ 9’ ಈ ಹಿಂದಿನ ಹಡಗು ಪ್ರಯಾಣಿಸುವುದಕ್ಕಿಂತ ಹೆಚ್ಚು ದೂರ ಪಯಣಿಸುತ್ತದೆ. ಇದರಿಂದ ಮೃತರಿಗೆ ವಿದಾಯ ಕೋರಲು ಕುಟುಂಬ ಹಾಗೂ ಸಂಬಂಧಿಕರಿಗೆ ಹೆಚ್ಚು ಕಾಲ ಸಿಗುತ್ತದೆ ಬೀಜಿಂಗ್ ಅಂತ್ಯಸಂಸ್ಕಾರ ಸೇವಾ ಕೇಂದ್ರದ ಮುಖ್ಯಸ್ಥ ವಾಂಗ್ ಡಿಯೋಂಗ್ ಹೇಳಿದ್ದಾರೆ. ಮೃತದೇಹಗಳನ್ನು ದಫನ ಮಾಡುವುದು ಚೀನಾದಲ್ಲಿ ಪಾಲಿಸುತ್ತಿರುವ ಸಾಂಪ್ರದಾಯಿಕ ಆಚರಣೆ. ಆದರೆ, ಭೂಮಿಯ ಕೊರತೆಯಿಂದ ಚೀನಾ ಸರಕಾರ ಶವ ದಹನಕ್ಕೆ ಉತ್ತೇಜನ ನೀಡಿತು. ಚಿತಾಭಸ್ಮವನ್ನು ಸಂಗ್ರಹಿಸಿ ಗೋರಿ ಕಟ್ಟಲು ಅವಕಾಶ ನೀಡಿತ್ತು. ಆದರೆ, ನಗರೀಕರಣದಿಂದ ಸ್ಥಳದ ಅಭಾವವುಂಟಾಯಿತು.

ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸರಕಾರ ಸಣ್ಣ ಸ್ಮಶಾನ ಹಾಗೂ ಸಮುದ್ರ ದಹನ, ಹೂಗಿಡಕ್ಕೆ ಚಿತಾಭಸ್ಮವನ್ನು ಎರಚುವುದು ಸೇರಿದಂತೆ ಹಲವು ಪರಿಸರ ಸ್ನೇಹಿ ಪರ್ಯಾಯಗಳನ್ನು ಅನುಸರಿಸಲು ಚೀನಾ ಆರಂಭಿಸಿತು. 2020ರಲ್ಲಿ ಅಂತ್ಯಸಂಸ್ಕಾರಗಳಲ್ಲಿ ಶೇ. 50ನ್ನು ಪರಿಸರ ಸ್ನೇಹಿ ಮಾಡಲು ಬೀಜಿಂಗ್ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News