ಬೆಂಗ್ರೆ: ಮೂವರು ಯುವಕರ ಮೇಲೆ ತಲವಾರು ದಾಳಿ

Update: 2018-04-09 17:41 GMT
 ಅನ್‌ವೀಝ್

ಮಂಗಳೂರು, ಎ.9:  ನಗರ ಹೊರವಲಯದ ಕಸಬಾ ಬೆಂಗರೆಯಲ್ಲಿ ರವಿವಾರ ರಾತ್ರಿ ಸುಮಾರು 11 ಗಂಟೆಗೆ ಮೂವರು ಯುವಕರ ಮೇಲೆ ತಂಡವೊಂದು ಮಾರಕಾಯುಧಗಳಿಂದ ದಾಳಿ ನಡೆಸಿದ ಘಟನೆ ನಡೆದಿದೆ.

ಕಸಬಾ ಬೆಂಗ್ರೆ ನಿವಾಸಿಗಳಾದ ಅನ್‌ವೀಝ್ (17), ಮುಹಮ್ಮದ್ ಸಿರಾಜ್ (16), ಮುಹಮ್ಮದ್ ಇಜಾಝ್ ದಾಳಿಗೊಳಗಾದ ಯುವಕರು.

ಗಾಯಾಳುಗಳನ್ನು ನಗರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಮೂವರು ಕೂಡ ಚೇತರಿಸಿಕೊಂಡಿದ್ದಾರೆ.

ಘಟನೆಯ ವಿವರ

ಕಸಬಾ ಬೆಂಗರೆ ನಿವಾಸಿಗಳಾದ ಮೂವರು ಯುವಕರು ಕೂಳೂರು ಬಳಿಯ ಹೊಟೇಲ್ನಲ್ಲಿ ಊಟ ಮಾಡಿ ಮನೆಗೆ ಮರಳುವಾಗ ಕಸಬಾ ಬೆಂಗರೆಯ ಫುಟ್ಬಾಲ್ ಮೈದಾನದ ಬಳಿ ನಿಂತು ಮೊಬೈಲ್ ವೀಕ್ಷಿಸುತ್ತಿದ್ದಾಗ ಐದಾರು ಮಂದಿ ಮುಸುಕುಧಾರಿಗಳು ಏಕಾಏಕಿ ಚಾಕುವಿನಿಂದ ತಿವಿದರು ಎನ್ನಲಾಗಿದೆ. ಅಪಾಯದ ಮುನ್ಸೂಚನೆ ಅರಿತ ಸಿರಾಜ್ ಮತ್ತು ಇಜಾಝ್ ದುಷ್ಕರ್ಮಿಗಳ ಕೈಯಿಂದ ಪಾರಾಗಿ ಮೊಬೈಲ್ ಸಹಾಯದಿಂದ ಗೆಳೆಯರನ್ನು ಸಂಪರ್ಕಿಸಿದರು. ಗೆಳೆಯರು ತಕ್ಷಣ ಕಾರಿನಲ್ಲಿ ಆಗಮಿಸಿ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಗಂಭೀರ ಏಟಿಗೊಳಗಾದ ಅನ್‌ವೀಝ್ ದ್ವಿಚಕ್ರ ಸಮೇತ ನೆಲಕ್ಕುರುಳಿದ್ದರು. ಇದೇ ದಾರಿಯಾಗಿ ಬರುತ್ತಿದ್ದ ಸುಹೈಲ್ ಮತ್ತು ಜಲೀಲ್ ಎಂಬವರು ಇದನ್ನು ಕಂಡು ತಕ್ಷಣ ದೋಣಿಯ ಮೂಲಕ ಬಂದರು ದಕ್ಕೆಗೆ ಅನ್‌ವೀಝ್‌ರನ್ನು ಸಾಗಿಸಿ ಬಳಿಕ ಆ್ಯಂಬುಲೆನ್ಸ್‌ನಲ್ಲಿ  ಆಸ್ಪತ್ರೆಗೆ ದಾಖಲಿಸಿದರು.

ರಿಕ್ಷಾ ಚಾಲಕ ಅಶ್ರಫ್‌ರ ಪುತ್ರ ಅನ್ವೀಝ್ ದ್ವಿತೀಯ ಪಿಯುಸಿ ಓದುತ್ತಿದ್ದು, ಕೆಲಸದ ಹುಡುಕಾಟದಲ್ಲಿದ್ದ. ಮುಹಮ್ಮದ್ ಸಿರಾಜ್ ಕೂಡ ದ್ವಿತಿಯ ಪಿಯುಸಿ ಓದುತ್ತಿದ್ದಾನೆ. ಮುಹಮ್ಮದ ಇಜಾಝ್ ಮೊಬೈಲ್ ಶಾಪ್‌ನಲ್ಲಿದ್ದಾನೆ. ಇವರು ಯಾವುದೇ ಪ್ರಕರಣದಲ್ಲಿ ಭಾಗಿಯಾಗಿದ್ದವರು ಅಲ್ಲ ಎಂದು ಸ್ಥಳೀಯರು ಪತ್ರಿಕೆಗೆ ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಅಮಲು ದ್ರವ್ಯದ ಬಾಟಲಿ ಕಂಡು ಬಂದಿದ್ದು, ಮುಸುಕುಧಾರಿಗಳು ಪರಿಸರದಲ್ಲಿ ಅಶಾಂತಿ ಸೃಷ್ಟಿಸಲು ಈ ಕೃತ್ಯ ನಡೆಸಿರಬೇಕು ಎಂದು ಶಂಕಿಸಲಾಗಿದೆ. ಇಜಾಝ್ ನೀಡಿದ ದೂರಿನಂತೆ ಪಣಂಬೂರು ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News