ಕಾರ್ಕಳದ ನೆಲ್ಲಿಕಾರಿನಲ್ಲಿ ರಸ್ತೆ ಅಪಘಾತ: ತಾಯಿ,ಮಗ ಮೃತ್ಯು

Update: 2018-04-09 06:22 GMT

ಮೂಡುಬಿದಿರೆ, ಎ.9: ಇನ್ನೋವಾ ಮತ್ತು ಓಮ್ನಿ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟು ಹಲವರು ಗಾಯಗೊಂಡ ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಕಳ ತಾಲೂಕಿನ ನೆಲ್ಲಿಕಾರು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಓಮ್ನಿಯಲ್ಲಿ ಸಂಚರಿಸುತ್ತಿದ್ದ ತೀರ್ಥಹಳ್ಳಿಯ ಸೋಮಶೇಖರ್(45) ಹಾಗೂ ತಾಯಿ ರತ್ನಮ್ಮ (70) ಎಂದು ಗುರುತಿಸಲಾಗಿದೆ.

ತೀರ್ಥಹಳ್ಳಿಯಿಂದ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದ ಓಮ್ನಿಯಲ್ಲಿ ಸೋಮಶೇಖರ್, ರತ್ನಮ್ಮ ಸೇರಿದಂತೆ ಒಂಬತ್ತು ಮಂದಿಯಿದ್ದರೆನ್ನಲಾಗಿದೆ. ಇವರಿದ್ದ ಓಮ್ನಿ ಕಾರು ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ನೆಲ್ಲಿಕಾರು ತಲುಪುತ್ತಿದ್ದಂತೆ ಇನ್ನೋವಾ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ಓಮ್ನಿಯಲ್ಲಿದ್ದ ಇತರ ಏಳು ಮಂದಿ ಗಾಯಗೊಂಡಿದ್ದು, ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋವಾ ಕಾರಿನಲ್ಲಿದ್ದವರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಮೃತದೇಹವನ್ನು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News