ಹೊಸಮನೆಯನ್ನು ಖರೀದಿಸುತ್ತೀರಾ..? ಈ ಮುನ್ನೆಚ್ಚರಿಕೆಗಳನ್ನು ಅಗತ್ಯ ವಹಿಸಿ

Update: 2018-04-09 13:39 GMT

ಸ್ವಂತ ಮನೆಯ ಖರೀದಿಯು ವ್ಯಕ್ತಿಯ ಜೀವನದಲ್ಲಿ ಮಹತ್ವದ ಘಟ್ಟವಾಗಿದೆ. ಕೆಲವರು ತಮ್ಮ ಉಳಿತಾಯದ ಹಣದಿಂದ ಮನೆಯನ್ನು ಖರೀದಿಸಿದರೆ ಇತರರು ಸ್ವಂತ ಮನೆಯನ್ನು ಹೊಂದುವ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಬ್ಯಾಂಕ್ ಸಾಲವನ್ನು ನೆಚ್ಚಿಕೊಳ್ಳುತ್ತಾರೆ.

ಹೆಚ್ಚಿನ ಗ್ರಾಹಕರು ಮನೆ ಖರೀದಿಸುವಾಗ ಬಿಲ್ಡರ್‌ನ ವರ್ಚಸ್ಸನ್ನೇ ನಂಬಿಕೊಂಡಿರುತ್ತಾರೆ. ಆದರೆ ಇದು ತಪ್ಪು ಧೋರಣೆಯಾಗಿದೆ. ದಾಖಲೆಗಳ ಸರಿಯಾದ ಪರಿಶೀಲನೆ ಮನೆ ಖರೀದಿಗೆ ಏಕಮಾತ್ರ ಮಾನದಂಡ ವಾಗಿದೆ. ನೀವು ಮನೆ ಖರೀದಿಗೆ ಹಣವನ್ನು ಹೂಡುವ ಮೊದಲು ಎಚ್ಚರಿಕೆಯಿಂದಿರಬೇಕು ಮತ್ತು ಬಿಲ್ಡರ್ ಎಲ್ಲ ಅಗತ್ಯ ಕಾಗದಪತ್ರಗಳ ಕೆಲಸಗಳನ್ನು ಪೂರೈಸಿದ್ದಾನೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

ಅಲ್ಲದೆ ವಿವಿಧ ಕಡೆಗಳಲ್ಲಿ ವಿಚಾರಿಸಿ ಬಿಲ್ಡರ್‌ನ ವಿಶ್ವಾಸಾರ್ಹತೆಯನ್ನು ದೃಢಪಡಿಸಿಕೊಳ್ಳುವುದೂ ಮುಖ್ಯವಾಗಿದೆ. ಬಿಲ್ಡರ್ ಹಿಂದೆ ಪೂರ್ಣಗೊಳಿಸಿರುವ ಮತ್ತು ಹಾಲಿ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಪರಿಶೀಲಿಸಬಹುದು ಅಥವಾ ಆನ್‌ಲೈನ್‌ನಲ್ಲಿ ವಿಚಾರಣೆಗಳನ್ನು ಪೋಸ್ಟ್ ಮಾಡಬಹುದು.

ನೂತನ ಮನೆಯನ್ನು ಖರೀದಿಸುವಾಗ ನೀವು ಅಗತ್ಯ ವಾಗಿ ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ವಹಿಸಬೇಕು.

►  ಹಕ್ಕುಪತ್ರ ವಸತಿ

ಯೋಜನೆಯು ನಿರ್ಮಾಣಗೊಳ್ಳುವ ಭೂಮಿಯ ಹಕ್ಕುಪತ್ರ ಅಥವಾ ಮಾಲಿಕತ್ವ ಪುರಾವೆಯನ್ನು ಪರಿಶೀಲಿಸುವುದು ಅತ್ಯಂತ ಮುಖ್ಯವಾಗಿದೆ. ಬಿಲ್ಡರ್ ತಾನು ಮಾರಾಟ ಮಾಡುತ್ತಿರುವ ಆಸ್ತಿಯ ಪೂರ್ಣ ಒಡೆತನವನ್ನು ಹೊಂದಿದ್ದಾನೆಯೇ ಮತ್ತು ಮಾಲಿಕತ್ವವನ್ನು ಮಾರಾಟ ಮಾಡಲು ಅಥವಾ ವರ್ಗಾವಣೆಗೊಳಿಸಲು ಆತನಿಗೆ ಹಕ್ಕು ಇದೆಯೇ ಎನ್ನುವುದರ ಸ್ಪಷ್ಟ ಚಿತ್ರಣವನ್ನು ಇದರಿಂದ ಪಡೆಯಬಹುದಾಗಿದೆ. ಆಸ್ತಿಗೆ ಸಂಬಂಧಿಸಿ ದಂತೆ ಯಾವುದಾದರೂ ವ್ಯಾಜ್ಯವಿದೆಯೇ ಎನ್ನುವುದೂ ಇದರಿಂದ ಗೊತ್ತಾಗುತ್ತದೆ. ಹಕ್ಕುಪತ್ರದ ಪರಿಶೀಲನೆಗೆ ನುರಿತ ವಕೀಲರ ನೆರವು ಪಡೆಯುವುದು ಒಳ್ಳೆಯದು.

►  ಅನುಮತಿ ಮತ್ತು ನಿರಾಕರಣೆಯ ಮಾಹಿತಿ

  ಬಿಲ್ಡರ್ ಯೋಜನೆಯ ಕಾಮಗಾರಿಯ ವಿವಿಧ ಹಂತ ಗಳಲ್ಲಿ ಒಳಚರಂಡಿ ಇಲಾಖೆ, ಅರಣ್ಯ ಇಲಾಖೆ, ಪರಿಸರ ಇಲಾಖೆ, ಸಂಚಾರ ಮತ್ತು ಸಮನ್ವಯ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಅನುಮತಿ ಮತ್ತು ನಿರಾಕ್ಷೇಪಣಾ ಪತ್ರಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಇವುಗಳ ಜೊತೆಗೆ ಕಾಮಗಾರಿ ಆರಂಭಿಸಲು ನೀಡಿರುವ ಪ್ರಮಾಣಪತ್ರವನ್ನೂ ಗ್ರಾಹಕರು ಪರಿಶೀಲಿಸುವುದು ಅಗತ್ಯವಾಗುತ್ತದೆ. ಈ ಪ್ರಮಾಣಪತ್ರವು ಬಿಲ್ಡರ್ ತನ್ನ ಯೋಜನೆಯ ಕಾಮಗಾರಿಯನ್ನು ಕಾನೂನುಬದ್ಧವಾಗಿ ಆರಂಭಿಸಲು ನೀಡಿರುವ ಅನುಮತಿಯಾಗಿರುತ್ತದೆ. ಇಂತಹ ಪ್ರಮಾಣಪತ್ರವಿಲ್ಲದ ಯಾವುದೇ ನಿರ್ಮಾಣವು ಅನಧಿಕೃತವಾಗುತ್ತದೆ.

► ಋಣಭಾರ ಪ್ರಮಾಣಪತ್ರ

 ಯಾವುದೇ ವ್ಯಾಜ್ಯದಲ್ಲಿ ಸಿಲುಕಿರುವ ಅಥವಾ ಹಣಕಾಸು ಬಾಧ್ಯತೆಗಳಿರುವ ಆಸ್ತಿಯಲ್ಲಿ ಹಣವನ್ನು ತೊಡಗಿಸುವುದು ಬುದ್ಧಿವಂತಿಕೆಯಲ್ಲ. ಸಾಮಾನ್ಯವಾಗಿ ಬಿಲ್ಡರ್‌ಗಳು ಮತ್ತು ಬ್ರೋಕರ್‌ಗಳು ಇಂತಹ ವಿಷಯಗಳನ್ನು ಗ್ರಾಹಕರಿಂದ ಮುಚ್ಚಿಡಲು ಬಯಸುತ್ತಾರೆ. ಆದರೆ ಗ್ರಾಹಕರು ಎಚ್ಚರಿಕೆಯಿಂದಿ ರಬೇಕು ಮತ್ತು ಆಸ್ತಿಯು ಯಾವುದೇ ಕಾನೂನು ವಿವಾದಗಳಿಂದ ಮುಕ್ತವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಎನ್‌ಕಂಬರನ್ಸ್ ಸರ್ಟಿಫಿಕೇಟ್ ಅಥವಾ ಋಣಭಾರ ಪ್ರಮಾಣಪತ್ರವನ್ನು ತೋರಿಸು ವಂತೆ ಬಿಲ್ಡರ್‌ಗೆ ಒತ್ತಾಯಿಸಬೇಕು. ವಿವಾದಗಳಲ್ಲಿರುವ ಆಸ್ತಿಯನ್ನು ಖರೀದಿಸಿದರೆ ಭವಿಷ್ಯದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

► ಲೇಔಟ್ ಪ್ಲಾನ್

    ರಿಯಲ್ ಎಸ್ಟೇಟ್ ಹಗರಣಗಳು ಬೆಳಕಿಗೆ ಬರುತ್ತಿರುವುದರೊಂದಿಗೆ ಗ್ರಾಹಕರು ನೂತನ ಮನೆಯನ್ನು ಖರೀದಿಸುವ ಮುನ್ನ ಎಚ್ಚರಿಕೆಯನ್ನು ವಹಿಸಿ ಎಲ್ಲ ಕಾಗದಪತ್ರಗಳನ್ನು ಸರಿಯಾಗಿ ಪರಿಶೀಲಿಸುವುದು ಅತ್ಯಗತ್ಯವಾಗಿದೆ. ಲೇಔಟ್ ಪ್ಲಾನ್‌ನಂತಹ ಮಹತ್ವದ ದಾಖಲೆಗಳಿಗೆ ಸಂಬಂಧಿತ ಪ್ರಾಧಿಕಾರಗಳ ಅನುಮತಿ ದೊರಕಿದೆಯೇ ಎನ್ನುವುದನ್ನು ಗ್ರಾಹಕರು ಖಚಿತ ಪಡಿಸಿಕೊಳ್ಳಲೇಬೇಕು. ಆಕ್ಯುಪನ್ಸಿ ಸರ್ಟಿಫಿಕೇಟ್ ಅಥವಾ ಅನುಭೋಗ ಪ್ರಮಾಣಪತ್ರವನ್ನೂ ಪರಿಶೀಲಿಸ ಬೇಕಾಗುತ್ತದೆ. ಇದರಿಂದ ಬಿಲ್ಡರ್ ಪ್ಲಾನ್‌ಗೆ ಅನುಗುಣ ವಾಗಿ ಯೋಜನೆಯನ್ನು ನಿರ್ಮಿಸಿದ್ದಾನೆಯೇ ಎನ್ನುವುದು ಗೊತ್ತಾಗುತ್ತದೆ.

►  ಖರೀದಿ ಒಪ್ಪಂದ

 ಈ ಎಲ್ಲ ದಾಖಲೆಪತ್ರಗಳನ್ನು ಪರಿಶೀಲಿಸಿದ ಬಳಿಕ ನಿಮಗೆ ಭರವಸೆ ನೀಡಲಾಗಿರುವ ಪ್ರತಿಯೊಂದು ವಿಷಯವೂ ಖರೀದಿ ಒಪ್ಪಂದದಲ್ಲಿ ಉಲ್ಲೇಖಗೊಂಡಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿರ್ಮಾಣ, ಹಣಪಾವತಿ, ಅಪಾರ್ಟ್‌ಮೆಂಟ್‌ನ ನಿರ್ದಿಷ್ಟತೆಗಳು, ಹಣಪಾವತಿಗೆ ಗಡುವು ಮತ್ತು ವಿಳಂಬವಾದರೆ ದಂಡಶುಲ್ಕ ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲ ವಿವರಗಳು ಈ ಒಪ್ಪಂದದಲ್ಲಿ ಇರಬೇಕು. ನಿಮಗೆ ಭರವಸೆ ನೀಡಲಾಗಿರುವ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ವೈಫಲ್ಯಕ್ಕೆ ಅಥವಾ ಯಾವುದೇ ತಪ್ಪುಗಳಿಗೆ ಬಿಲ್ಡರ್‌ನನ್ನು ಹೊಣೆಗಾರನಾಗಿಸಲು ಈ ಖರೀದಿ ಒಪ್ಪಂದವು ಮೂಲ ಆಧಾರವಾಗಿರುತ್ತದೆ ಎನ್ನುವುದನ್ನು ಮರೆಯಬೇಡಿ.

ನೂತನ ಮನೆ ಖರೀದಿಯು ಜೀವನದಲ್ಲಿಯ ಬೃಹತ್ ಹೂಡಿಕೆಯ ನಿರ್ಧಾರವಾಗಿರುತ್ತದೆ. ಈ ಮುನ್ನೆಚ್ಚರಿಕೆ ಗಳನ್ನು ವಹಿಸುವ ಮೂಲಕ ನಿಮ್ಮ ಹೂಡಿಕೆಯು ಸುರಕ್ಷಿತ ವಾಗಿದೆ ಎನ್ನುವುದನ್ನು ನೀವು ಖಚಿತ ಪಡಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News