×
Ad

ಬ್ಯಾಂಕ್‌ಗೆ 2,654 ಕೋಟಿ ರೂ. ವಂಚನೆ: ವಡೋದರದ ಡಿಪಿಐಎಲ್ ಸಂಸ್ಥೆಯ ಮೇಲೆ ಇಡಿ ದಾಳಿ

Update: 2018-04-09 21:57 IST

ಹೊಸದಿಲ್ಲಿ, ಎ.9: ವಿವಿಧ ಬ್ಯಾಂಕ್‌ಗಳಿಗೆ 2,654 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ವಡೋದರ ಮೂಲದ ಸಂಸ್ಥೆಯ ಮೇಲೆ ದಾಳಿ ನಡೆಸಿದೆ.

ವಡೋದರ ನಗರದ ಗೌರಾ ಪ್ರದೇಶದಲ್ಲಿರುವ ಡೈಮಂಡ್ ಪವರ್ ಇನ್‌ಫ್ರಾಸ್ಟ್ರಕ್ಚರ್ ಲಿ.(ಡಿಪಿಐಎಲ್) ಎಂಬ ಸಂಸ್ಥೆಯ ಕಾರ್ಪೊರೇಟ್ ಕಚೇರಿ, ವಡಾದಲಾ ಮತ್ತು ರನೋಲಿಯಲ್ಲಿರುವ ಫ್ಯಾಕ್ಟರಿಗಳು, ನಿಝಾಂಪುರ ಮತ್ತು ಅಲ್ಕಾಪುರಿಯಲ್ಲಿರುವ ಕಾರ್ಯನಿರ್ವಾಹಕ ಅಧಿಕಾರಿಯ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಆಧಾರದಲ್ಲಿ ಈ ಸಂಸ್ಥೆಯ ವಿರುದ್ಧ ಅಕ್ರಮ ಹಣ ಸಾಗಣೆ ತಡೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿದ ಬಳಿಕ ದಾಳಿ ನಡೆಸಲಾಗಿದೆ. ಬ್ಯಾಂಕ್‌ಗಳಿಗೆ ಹಣ ವಂಚಿಸಿ ಅದನ್ನು ಅಕ್ರಮ ಆಸ್ತಿ ಖರೀದಿಸಲು ಬಳಸಲಾಗಿದೆಯೇ ಎಂಬ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ವಿದ್ಯುತ್ತಿನ ವಯರ್ ಹಾಗೂ ಉಪಕರಣಗಳನ್ನು ಉತ್ಪಾದಿಸುವ ಈ ಸಂಸ್ಥೆ 2008ರಿಂದ 11 ಬ್ಯಾಂಕ್‌ಗಳ ಒಕ್ಕೂಟದಿಂದ ಸುಳ್ಳು ಹೇಳಿ ಸಾಲ ಪಡೆದಿದ್ದು, 2016ರ ಜೂನ್ 29ರವರೆಗೆ ಸುಮಾರು 2,654.40 ಕೋಟಿ ರೂ. ಸಾಲ ಮರುಪಾವತಿಸದೆ ವಂಚಿಸಿದ್ದು, ಈ ಮೊತ್ತವನ್ನು 2016-17ರ ಸಾಲಿನಲ್ಲಿ ಅನುತ್ಪಾದಕ ಆಸ್ತಿಯೆಂದು ಪರಿಗಣಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ಬ್ಯಾಂಕ್‌ಗಳ ಒಕ್ಕೂಟವು ಡಿಪಿಐಎಲ್ ಹಾಗೂ ಅದರ ನಿರ್ದೇಶಕರಿಗೆ ಸಾಲ ಮಂಜೂರು ಮಾಡುವಾಗ ಅವರು ಆರ್‌ಬಿಐನ ಸುಸ್ತಿದಾರರ ಪಟ್ಟಿಯಲ್ಲಿದ್ದರು ಹಾಗೂ ಇಸಿಜಿಸಿ(ಎಕ್ಸ್‌ಪೋರ್ಟ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್)ನ ಎಚ್ಚರಿಕೆಯ ಪಟ್ಟಿಯಲ್ಲಿದ್ದರು ಎಂದು ಸಿಬಿಐ ಆರೋಪಿಸಿದೆ. ವಾಯಿದೆ ಸಾಲಕ್ಕೆ ಆ್ಯಕ್ಸಿಸ್ ಬ್ಯಾಂಕ್ ಹಾಗೂ ನಗದು ಸಾಲ ಮಿತಿಗೆ ಬ್ಯಾಂಕ್ ಆಫ್ ಇಂಡಿಯಾ ‘ಲೀಡ್ ಬ್ಯಾಂಕ್’ ಆಗಿತ್ತು. ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳ ವೌನಸಮ್ಮತಿಯೊಂದಿಗೆ ಈ ಸಂಸ್ಥೆ ಹೆಚ್ಚುವರಿ ಸಾಲ ಸೌಲಭ್ಯ ಪಡೆದಿತ್ತು. ಅಲ್ಲದೆ ಲೀಡ್ ಬ್ಯಾಂಕ್‌ಗಳಿಗೆ ಖೋಟಾ ‘ಸ್ಟಾಕ್ ಸ್ಟೇಟ್‌ಮೆಂಟ್’ ಸಲ್ಲಿಸಿ ಹೆಚ್ಚುವರಿ ಸಾಲ ಸೌಲಭ್ಯ ಪಡೆದಿದೆ ಎಂದು ಸಿಬಿಐ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News