ಬೆಳ್ಳಂದೂರು ಕೆರೆ ಮಾಲಿನ್ಯ ಪ್ರಕರಣ: ಕರ್ನಾಟಕ ಸರಕಾರಕ್ಕೆ ಎನ್‌ಜಿಟಿ ತರಾಟೆ,ಕೆರೆಗಳ ತಪಾಸಣೆಗೆ ಸಮಿತಿ ರಚನೆ

Update: 2018-04-11 15:11 GMT

ಹೊಸದಿಲ್ಲಿ,ಎ.11: ಬೆಂಗಳೂರಿನ ಬೆಳ್ಳಂದೂರು ಕೆರೆಯ ಕುರಿತು ರಾಜ್ಯ ಸರಕಾರದ ಕ್ರಿಯಾ ಯೋಜನೆಯ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ವು ಬುಧವಾರ ಕರ್ನಾಟಕವನ್ನು ತೀವ್ರ ತರಾಟೆಗೆತ್ತಿಕೊಂಡಿತು. ನಗರದಲ್ಲಿಯ ಕೆರೆಗಳ ತಪಾಸಣೆಗಾಗಿ ಸಮಿತಿಯೊಂದನ್ನು ಅದು ರಚಿಸಿತು.

ರಾಜ್ಯ ಸರಕಾರವು ಸಲ್ಲಿಸಿರುವ ವರದಿಯು ತಪ್ಪುಗಳಿಂದ ಕೂಡಿದೆ ಮತ್ತು ದಾರಿ ತಪ್ಪಿಸುತ್ತಿದೆ. ವಾಸ್ತವದಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ವಿವರಗಳು ಈ ವರದಿಯಲ್ಲಿಲ್ಲ ಎಂದು ಹೇಳಿದ ಎನ್‌ಜಿಟಿಯ ಪ್ರಭಾರ ಅಧ್ಯಕ್ಷ ನ್ಯಾ.ಜವಾದ್ ರಹೀಮ್ ನೇತೃತ್ವದ ಪೀಠವು, ನಾವು ರಾಜ್ಯದ ಅಧಿಕಾರಿಗಳಿಂದ ನಿರೀಕ್ಷಿಸಿದ್ದು ಇದಲ್ಲ. ರಾಜ್ಯವು ಸಲ್ಲಿಸಿರುವ ವರದಿಯು ನಮಗೆ ಸಮಾಧಾನವನ್ನು ತಂದಿಲ್ಲ. ನ್ಯಾಯಾಧಿಕರಣದ ಆದೇಶ ಪಾಲನೆಯಲ್ಲಿ ಕರ್ತವ್ಯಲೋಪವಾಗಿದೆ ಎಂದು ತರಾಟೆಗೆತ್ತಿಕೊಂಡರು.

ಕಡತಗಳನ್ನು ಓದಲು ಮತ್ತು ಅವುಗಳನ್ನು ಮುಚ್ಚಲಷ್ಟೇ ನಾವು ಇಲ್ಲಿ ಕುಳಿತಿಲ್ಲ. ಆದೇಶದ ಪಾಲನೆಯಾಗಲೇಬೇಕು. ಅದಕ್ಕಾಗಿ ನಾವು ಸೇನೆಯನ್ನು ಕರೆಸಬೇಕೆಂದು ನೀವು ಬಯಸಿದ್ದೀರಾ ಎಂದು ಪೀಠವು ಪ್ರಶ್ನಿಸಿತು.

 ರಾಜ್ಯ ಸರಕಾರಕ್ಕೆ ದಂಡ ವಿಧಿಸುವ ನಿಲುವನ್ನು ಕೊನೇ ಕ್ಷಣದಲ್ಲಿ ಬದಲಿಸಿಕೊಂಡ ನ್ಯಾಯಾಧಿಕರಣವು ಹಿರಿಯ ನ್ಯಾಯವಾದಿ ರಾಜ್ ಪಂಜ್ವಾನಿ, ಐಐಎಸ್‌ಸಿ-ಬೆಂಗಳೂರಿನ ಓರ್ವ ಪ್ರೊಫೆಸರ್, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಓರ್ವ ಹಿರಿಯ ವಿಜ್ಞಾನಿ, ಬಿಬಿಎಂಪಿಯ ಆಯುಕ್ತ, ಬಿಡಿಎ ಕಾರ್ಯದರ್ಶಿ ಮತ್ತು ಹಿರಿಯ ನ್ಯಾಯವಾದಿ ಆಯ್ಕೆ ಮಾಡುವ ಓರ್ವ ವಕೀಲರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಎ.14 ಮತ್ತು 15ರಂದು ಅಗರ, ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ತಪಾಸಣೆಯನ್ನು ನಡೆಸಲಿದೆ. ಎನ್‌ಜಿಟಿಗೆ ವಿವರವಾದ ವರದಿಯನ್ನು ಸಲ್ಲಿಸುವುದರೊಂದಿಗೆ ಈ ಕೆರೆಗಳ ಸಮೀಪದಲ್ಲಿರುವ ಅಪಾರ್ಟ್‌ಮೆಂಟ್‌ಗಳು ಮತ್ತು ಇತರ ಸಂಸ್ಥೆಗಳು ಉತ್ಪಾದಿಸುವ ಘನತ್ಯಾಜ್ಯದ ಪ್ರಮಾಣದ ಕುರಿತು ಮಾಹಿತಿಯನ್ನು ಒದಗಿಸಲಿದೆ.

ಕೆರೆಗಳಲ್ಲಿರುವ ಜಲಸಸ್ಯಗಳ ವ್ಯಾಪ್ತಿ, ಎ.10,2018ರವರೆಗೆ ನಡೆದಿರುವ ಬೆಂಕಿ ಕಾಣಿಸಿಕೊಂಡ ಘಟನೆಗಳು, ಕೆರೆಗಳ ಸುತ್ತಲಿನ ಸಂಸ್ಕರಣ ಸ್ಥಾವರಗಳ ಸ್ಥಿತಿ ಮತ್ತು ಅಪಾರ್ಟ್‌ಮೆಂಟ್‌ಗಳು ಅಧಿಕಾರಿಗಳಿಂದ ಅನುಭೋಗ ಪ್ರಮಾಣಪತ್ರಗಳನ್ನು ಪಡೆದಿವೆಯೇ ಎನ್ನುವುದನ್ನು ತನ್ನ ವರದಿಯಲ್ಲಿ ತಿಳಿಸುವಂತೆ ಎನ್‌ಜಿಟಿಯು ಸಮಿತಿಗೆ ಆದೇಶಿಸಿತು.

ನಿರ್ದಿಷ್ಟ ಆದೇಶಗಳನ್ನು ನೀಡಿದ್ದರೂ ಬೆಳ್ಳಂದೂರು ಕೆರೆಯಲ್ಲಿನ ಕಳೆಗಳನ್ನು ಮತ್ತು ನಿರುಪಯುಕ್ತ ಸಸ್ಯಗಳನ್ನು ನಿಯಮಿತವಾಗಿ ನಿರ್ಮೂಲಿಸದ್ದಕ್ಕಾಗಿ ಈ ಹಿಂದೆಯೂ ರಾಜ್ಯ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದ ಎನ್‌ಜಿಟಿಯು, ಮಾಸಿಕ ಪಾಲನಾ ವರದಿಗಳನ್ನು ಸಲ್ಲಿಸುವಂತೆ ನಿರ್ದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News