ಸಮಾನ ನಾಗರಿಕ ಸಂಹಿತೆ: ಸಾರ್ವಜನಿಕರ ಅನಿಸಿಕೆ, ಸಲಹೆ ಸಲ್ಲಿಕೆಗೆ ಅಂತಿಮ ಗಡುವು ವಿಸ್ತರಣೆ
ಹೊಸದಿಲ್ಲಿ, ಎ.11: ಸಮಾನ ನಾಗರಿಕ ಸಂಹಿತೆ ಕುರಿತ ತಮ್ಮ ಅನಿಸಿಕೆ ಹಾಗೂ ಸಲಹೆಗಳನ್ನು ಸಲ್ಲಿಸಲು, ಸಾರ್ವಜನಿಕರಿಗೆ ವಿಧಿಸಲಾಗಿದ್ದ ಅಂತಿಮ ಗಡುವು ನಾಲ್ಕು ದಿನಗಳ ಹಿಂದೆಯೇ ಕೊನೆಗೊಂಡಿದ್ದರೂ, ಭಾರತೀಯ ಕಾನೂನು ಆಯೋಗವು ಅದನ್ನು ಮತ್ತೆ ಮೇ6ಕ್ಕೆ ವಿಸ್ತರಿಸಿದೆ.
ಸಮಾನ ನಾಗರಿಕ ಸಂಹಿತೆಯೊಂದನ್ನು ರೂಪಿಸುವ ಉದ್ದೇಶದಿಂದ ಕಾನೂನು ಆಯೋಗವು ವಿವಿಧ ವೈಯಕ್ತಿಕ ಕಾನೂನುಗಳನ್ನು ಪರಿಶೀಲಿಸುತ್ತಿದೆ.
ಮಾಚ್ 19ರಂದು ಆಯೋಗವು ಸಮಾನ ನಾಗರಿಕ ಸಂಹಿತೆ ಕುರಿತ ತಮ್ಮ ಅಭಿಪ್ರಾಯ ಹಾಗೂ ಆಕ್ಷೇಪಗಳನ್ನು ಎಪ್ರಿಲ್ 6ರೊಳಗೆ ಸಲ್ಲಿಸುವಂತೆ ಆಯೋಗವು ಸಾರ್ವಜನಿಕರಿಗೆ ಮನವಿ ಮಾಡಿತ್ತು. ಆದರೆ ಮಂಗಳವಾರ ಹೊಸ ನೋಟಿಸ್ ಜಾರಿಗೊಳಿಸಿದ ಆಯೋಗವು ಸಾರ್ವಜನಿಕರ ಕೋರಿಕೆಯ ಹಿನ್ನೆಲೆಯಲ್ಲಿ ಹಾಗೂ ಈ ಮೊದಲಿನ ನೋಟಿಸ್‌ಗೆ ವ್ಯಕ್ತವಾಗಿರುವ ಅಭೂತಪೂರ್ವ ಪ್ರತಿಕ್ರಿಯೆಯನ್ನು ಮನಗಂಡು ಗಡುವನ್ನು ವಿಸ್ತರಿಸಿರುವುದಾಗಿ ಆಯೋಗವು ತಿಳಿಸಿದೆ.
ಸಮಾನ ನಾಗರಿಕ ಸಂಹಿತೆಯ ಕುರಿತಾಗಿ ಸಮಿತಿಗೆ ಈವರೆಗೆ 60 ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿದ್ದಾಗಿ ಕಾನೂನು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಲಿ ಆಯೋಗದ ಅವಧಿಯು ಆಗಸ್ಟ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಆಡಳಿತಾರೂಢ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯ ವೇಳೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಮಾನನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಭರವಸೆ ನೀಡಿತ್ತು. ಆದರೆ ಅನೇಕ ಅಲ್ಪಸಂಖ್ಯಾತ ಸಮುದಾಯಗಳ ಗುಂಪುಗಳು ಅದನ್ನು ಬಲವಾಗಿ ವಿರೋಧಿಸುತ್ತಿವೆ. ತಮ್ಮ ಸಂಸ್ಕೃತಿ ಹಾಗೂ ಧಾರ್ಮಿಕ ಅನನ್ಯತೆಯನ್ನು ಅಳಿಸಿ ಹಾಕುವ ಪ್ರಯತ್ನ ಇದಾಗಿದೆಯೆಂದು ಅವು ಆರೋಪಿಸುತ್ತವೆ.
ಮುಸ್ಲಿಂ ವಿವಾಹ ಹಾಗೂ ವಿಚ್ಛೇದನಕ್ಕೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳನ್ನು ತೆರವುಗೊಳಿಸುವುದಾಗಿ ಆಯೋಗವು ಕಳೆದ ತಿಂಗಳು ತಿಳಿಸಿತ್ತು. 2016ರಲ್ಲಿ ಕಾನೂನು ಸಚಿವಾಲಯವು, ಆಯೋಗಕ್ಕೆ ಕಳುಹಿಸಿದ ಪ್ರಸ್ತಾವನೆಯೊಂದರಲ್ಲಿ ಸಮಾನ ನಾಗರಿಕ ಸಂಹಿತೆಗೆ ಸಂಬಂಧಿಸಿದ ವಿಷಯಗಳನ್ನು ಆಳವಾಗಿ ಪರಿಶೀಲಿಸಲು ಹಾಗೂ ಅದನ್ನ್ನು ಜಾರಿಗೆ ತರಲು ಕಾಲ ಪಕ್ವವಾಗಿದೆಯೇ ಎಂಬ ಬಗ್ಗೆಯೂ ಅದು ಸೂಚಿಸಿತ್ತು.
ಅದೇ ವರ್ಷದ ಅಕ್ಟೋಬರ್‌ನಲ್ಲಿ ಸಮಾನ ನಾಗರಿಕ ಸಂಹಿತೆಯ ವಿಷಯವಾಗಿ ರಾಜಕೀಯ ಪಕ್ಷಗಳು, ಧಾರ್ಮಿಕ ಗುಂಪುಗಳು ಹಾಗೂ ಸಾರ್ವಜನಿಕರಿಂದ ಅನಿಸಿಕೆ ಹಾಗೂ ಸಲಹೆಗಳನ್ನು ನೀಡುವಂತೆ ಕೋರಿತ್ತು.
ಆಯೋಗವು ಈ ವರ್ಷದ ಮಾರ್ಚ್ 19ರಂದು ಮತ್ತೊಮ್ಮೆ ಮನವಿ ಮಾಡಿ, ಸಾರ್ವಜನಿಕ ನಾಗರಿಕ ಸಂಹಿತೆಗೆ ಸಂಬಂಧಿಸಿ ಸಂಬಂಧಪಟ್ಟವರು ಹಾಗೂ ಸಾರ್ವಜನಿಕರಿಂದ ಸಲಹೆ ಹಾಗೂ ಶಿಫಾರಸುಗಳನ್ನು ಸಲ್ಲಿಸಲು ಕೋರಿತ್ತು. ಆದರೆ ತ್ರಿವಳಿ ತಲಾಖ್ ಪದ್ಧತಿಯನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ವಿಧೇಯಕವು ಸಂಸತ್‌ನಲ್ಲಿ ಅನುಮೋದನೆಗೆ ಬಾಕಿಯಿರುವುದರಿಂದ ಆ ವಿಷಯವಾಗಿ ಅನಿಸಿಕೆ ಹಾಗೂ ಚರ್ಚೆಯನ್ನು ನಡೆಸಬಾರದೆಂದು ಒತ್ತಾಯಿಸಿತ್ತು.