×
Ad

ಅಂಬೇಡ್ಕರ್ ಪ್ರತಿಮೆ ಸುತ್ತ ಕಬ್ಬಿಣದ ಪರದೆಗೆ ವಿರೋಧ

Update: 2018-04-11 21:32 IST

ಲಕ್ನೊ, ಎ.11: ಸಂವಿಧಾನ ಶಿಲ್ಪಿ , ದಲಿತರ ಮುಖಂಡ ಡಾ ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯ ರಕ್ಷಣೆಯ ಉದ್ದೇಶದಿಂದ ಪ್ರತಿಮೆ ಸುತ್ತ ಕಬ್ಬಿಣದ ಜಾಲರಿ(ಪರದೆ) ನಿರ್ಮಿಸುವುದನ್ನು ವಿರೋಧಿಸಿರುವ ಬಾಬಾಸಾಹೇಬ್ ಭೀಮ್‌ರಾಮ್ ಅಂಬೇಡ್ಕರ್ ವಿವಿ (ಬಿಬಿಎಯು)ಯ ದಲಿತ ವಿದ್ಯಾರ್ಥಿಗಳು , ಇದನ್ನು ತೆಗೆದುಹಾಕದಿದ್ದರೆ ಎಪ್ರಿಲ್ 14ರಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

 ಇತ್ತೀಚೆಗೆ ಉತ್ತರಪ್ರದೇಶದ ಹಲವೆಡೆ ಅಂಬೇಡ್ಕರ್ ಪ್ರತಿಮೆಗೆ ಹಾನಿ ಎಸಗುವ ಘಟನೆ ನಡೆದಿದ್ದು , ಇದನ್ನು ತಡೆಯುವ ಹಿನ್ನೆಲೆಯಲ್ಲಿ ಪ್ರತಿಮೆಯ ಸುತ್ತ ಕಬ್ಬಿಣದ ಪರದೆಯನ್ನು ನಿರ್ಮಿಸಲಾಗಿದೆ. ಲಕ್ನೊದ ಬಿಬಿಎಯು ವಿವಿಯಲ್ಲಿ ಅಂಬೇಡ್ಕರ್ ಪ್ರತಿಮೆ ಸುತ್ತ ಕಬ್ಬಿಣದ ಪರದೆಯ ಜೊತೆಗೆ ಮಡಚಬಲ್ಲ ಗೇಟ್ ವ್ಯವಸ್ಥೆಗೊಳಿಸಲಾಗಿದೆ.

ತಮ್ಮ ಮುಖಂಡನ ಪ್ರತಿಮೆಯನ್ನು ಕಬ್ಬಿಣದ ಪರದೆಯಿಂದ ಬಂಧಿಸಿಡುವುದು ನೋವಿನ ಸಂಗತಿಯಾಗಿದೆ. ಆದ್ದರಿಂದ ಅಂಬೇಡ್ಕರ್ ಅವರ 127ನೇ ಜನ್ಮ ದಿನವಾದ ಎಪ್ರಿಲ್ 14ರ ಮೊದಲು ಇದನ್ನು ತೆಗದುಹಾಕದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುತ್ತದೆ. ಈ ಸಂದರ್ಭ ಅಹಿತಕರ ಘಟನೆ ನಡೆದರೆ ಅದಕ್ಕೆ ವಿವಿ ಆಡಳಿತವೇ ನೇರ ಹೊಣೆಯಾಗಿದೆ ಎಂದು ದಲಿತ ವಿದ್ಯಾರ್ಥಿಗಳ ಪರವಾಗಿ ವಿವಿಯ ಉಪಕುಲಪತಿಯವರಿಗೆ ಮನವಿ ಸಲ್ಲಿಸಿದ ಸಂಶೋಧನಾ ವಿದ್ಯಾರ್ಥಿ ಬಸಂತ್ ಕನೌಜಿಯಾ ತಿಳಿಸಿದ್ದಾರೆ. ಆದರೆ ಈ ಪ್ರದೇಶದಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವ ಕಾರಣ ಪ್ರತಿಮೆಗೆ ಹಾನಿಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ವಿವಿಧೆಡೆ ನಡೆಯುತ್ತಿರುವ ಪ್ರತಿಮೆ ದ್ವಂಸ ಕಾರ್ಯಕ್ಕೂ ಇದಕ್ಕೂ ಸಂಬಂಧವಿಲ್ಲ. ಇದು ಕಾಕತಾಳೀಯ ಅಷ್ಟೇ ಎಂದು ವಿವಿಯ ವಕ್ತಾರೆ ರಚನಾ ಗಂಗ್ವಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News