×
Ad

ಶ್ರೀನಗರ: ಪ್ರತಿಭಟನಾ ಮೆರವಣಿಗೆಗೆ ಯತ್ನಿಸಿದ ಯಾಸಿನ್ ಮಲಿಕ್ ಬಂಧನ

Update: 2018-04-11 22:25 IST

ಶ್ರೀನಗರ, ಎ.11: ಜಮ್ಮಕಾಶ್ಮೀರದ ಕುಲ್ಗಾಂವ್ ಜಿಲ್ಲೆಯ ಭದ್ರತಾಪಡೆಗಳ ಜೊತೆ ನಡೆದ ಘರ್ಷಣೆಯಲ್ಲಿ ಇಬ್ಬರು ನಾಗರಿಕರ ಹತ್ಯೆ ಹಾಗೂ ಕಥುವಾದಲ್ಲಿ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಘಟನೆಯನ್ನು ಖಂಡಿಸಿ, ಬುಧವಾರ ಶ್ರೀನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸಿದ ಜೆಕೆಎಲ್‌ಎಫ್ ಅಧ್ಯಕ್ಷ ಯಾಸಿನ್ ಮಲಿಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಜಮ್ಮುಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್)ನ ಮುಖ್ಯ ಕಚೇರಿಯಿಂದ ಲಾಲ್‌ಚೌಕ್ ಪ್ರದೇಶದಲ್ಲಿರುವ ಅಬಿಗುಝಾರ್‌ವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಕೊಂಡೊಯ್ಯಲು ಮಲಿಕ್ ಯತ್ನಿಸಿದ್ದಾಗ ಅವರನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಮಲಿಕ್ ಜೊತೆ ಜೆಕೆಎಲ್‌ಎಫ್ ಮತ್ತಿತರ ಪ್ರತ್ಯೇಕತಾವಾದಿ ಗುಂಪುಗಳ ಹಲವು ಕಾರ್ಯಕರ್ತರನ್ನು ಕೂಡಾ ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂದು ಅವರು ಹೇಳಿದ್ದಾರೆ.

ಪ್ರತಿಭಟನಾ ಮೆರವಣಿಗೆಗೆ ಮುನ್ನ ಪ್ರತ್ಯೇಕತಾವಾದಿ ನಾಯಕರಾದ ಸೈಯದ್ ಅಲಿ ಶಾ ಗಿಲಾನಿ, ಮಿರ್ವೈಝ್ ಉಮ್ಮರ್ ಫಾರೂಕ್ ಹಾಗೂ ಮಲಿಕ್ ಮಾತನಾಡಿ, ಸಂತ್ರಸ್ತರಿಗೆ ನ್ಯಾಯ ದೊರೆಯುವ ತನಕವೂ ಹೋರಾಡುವುದಾಗಿ ತಿಳಿಸಿದರು.

ಇದಕ್ಕೂ ಮೊದಲು ಗೀಲಾನಿ ಹಾಗೂ ಮಿರ್ವೈಝ್ ಫೋನ್ ಮೂಲಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ, ಕಥುವಾದಲ್ಲಿ ಬಾಲಕಿಯ ಅತ್ಯಾಚಾರಗೈದು ಹತ್ಯೆ ಮಾಡಿದ ಹಂತಕರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸದಂತೆ ಕ್ರೈಂ ಬ್ರಾಂಚ್‌ನ್ನು ತಡೆಯಲು ನ್ಯಾಯವಾದಿಗಳು ಯತ್ನಿಸಿದ್ದನ್ನ್ನು ಖಂಡಿಸಿದರು.

ದಕ್ಷಿಣ ಕಾಶ್ಮೀರದ ಕುಲ್ಗಾಂವ್ ಜಿಲ್ಲೆಯ ಖುದ್ವಾನಿ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್ ವೇಳೆ ಭದ್ರತಾ ಪಡೆಗಳು ಮೂವರು ನಾಗರಿಕರನ್ನು ಹತ್ಯೆಗೈದ ಘಟನೆಯನ್ನು ಕೂಡಾ ಅವರು ಖಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News