ಕಚೇರಿಯಲ್ಲಿ ನೀಲಿಚಿತ್ರ ಡೌನ್‌ಲೋಡ್ ಮಾಡುತ್ತಿದ್ದ ಗೃಹ ಸಚಿವಾಲಯದ ಸಿಬ್ಬಂದಿ: ಮಾಜಿ ಗೃಹ ಕಾರ್ಯದರ್ಶಿ

Update: 2018-04-11 17:51 GMT
ಸಾಂದರ್ಭಿಕ ಚಿತ್ರ

 ಮುಂಬೈ,ಎ.11: ಕೇಂದ್ರ ಗೃಹ ಸಚಿವಾಲಯದಲ್ಲಿನ ಕೆಲವು ಅಧೀನ ಸಿಬ್ಬಂದಿಗಳು ಕಚೇರಿಯಲ್ಲಿ ಅಂತರ್ಜಾಲದಲ್ಲಿ ನೀಲಿಚಿತ್ರಗಳನ್ನು ವೀಕ್ಷಿಸುತ್ತಿದ್ದರು ಮತ್ತು ಮಾಲ್‌ವೇರ್‌ಗಳನ್ನು ಡೌನ್‌ಲೋಡ್ ಮಾಡುತ್ತಿದ್ದರು. ಇದು ಕಂಪ್ಯೂಟರ್ ನೆಟ್‌ವರ್ಕ್ ವ್ಯತ್ಯಯಗೊಳ್ಳಲು ಕಾರಣವಾಗುತ್ತಿತ್ತು ಎಂದು ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಅವರು ಬುಧವಾರ ಇಲ್ಲಿ ಬಹಿರಂಗಗೊಳಿಸಿದರು.

8-9 ವರ್ಷಗಳ ಹಿಂದೆ ತಾನು ಕೇಂದ್ರ ಗೃಹ ಕಾರ್ಯದರ್ಶಿಯಾಗಿದ್ದಾಗ ಪ್ರತಿ 60 ದಿನಗಳಿಗೆ ಇಡೀ ಕಂಪ್ಯೂಟರ್ ವ್ಯವಸ್ಥೆ ಕೈಕೊಡುತ್ತಿತ್ತು ಎಂದು ನಾಸ್ಕಾಂ ಪ್ರವರ್ತನೆಯ ಭಾರತೀಯ ದತ್ತಾಂಶ ಸುರಕ್ಷತಾ ಮಂಡಳಿಯ ಅಧ್ಯಕ್ಷರಾಗಿರುವ ಪಿಳ್ಳೈ ತಿಳಿಸಿದರು.

ಈ ಬಗ್ಗೆ ವಿವರಿಸಿದ ಅವರು, ಸಚಿವಾಲಯದ ಹಿರಿಯ ಅಧಿಕಾರಿಗಳು ತಡಸಂಜೆಯ ವರೆಗೂ ಮೀಟಿಂಗ್‌ಗಳಲ್ಲಿ ವ್ಯಸ್ತರಾಗಿರುತ್ತಿದ್ದರು. ಹೀಗಾಗಿ ಮೀಟಿಂಗ್ ನಂತರದ ಕೆಲಸಗಳನ್ನು ಪೂರೈಸಲು ಅಧೀನ ಸಿಬ್ಬಂದಿಗಳು ಕಚೇರಿಯಲ್ಲಿಯೇ ಉಳಿಯ ಬೇಕಾಗುತ್ತಿತ್ತು. ಹೊತ್ತು ಹೋಗಲು ಅವರು ಅಂತರ್ಜಾಲದಲ್ಲಿ ನೀಲಿಚಿತ್ರಗಳನ್ನು ವೀಕ್ಷಿಸುತ್ತಿದ್ದರು ಮತ್ತು ಸಿಕ್ಕಿದ್ದೆಲ್ಲವನ್ನೂ ಡೌನ್‌ಲೋಡ್ ಮಾಡುತ್ತಿದ್ದರು, ಇದರೊಂದಿಗೆ ಎಲ್ಲ ಮಾಲ್‌ವೇರ್‌ಗಳೂ ಡೌನ್‌ಲೋಡ್ ಆಗಿರುತ್ತಿದ್ದವು ಎಂದು ಚೊಚ್ಚಲ ಫಿನ್‌ಸೆಕ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಹೇಳಿದರು.

ಸಚಿವಾಲಯವು ಹಲವಾರು ನಿರ್ದೇಶಗಳನ್ನು ನೀಡಿತ್ತು ಮತ್ತು ವಿವರವಾದ ಪರಿಶೀಲನೆಯ ಬಳಿಕ ಸಿಬ್ಬಂದಿಗಳ ಈ ಕೃತ್ಯ ಬೆಳಕಿಗೆ ಬಂದಿತ್ತು ಎಂದರು.

ಇತ್ತೀಚಿಗಷ್ಟೇ ಕೆಲವು ಸರಕಾರಿ ವೆಬ್‌ಸೈಟ್‌ಗಳು ಸ್ಥಗಿತಗೊಂಡಿದ್ದು, ಇವುಗಳನ್ನು ಹ್ಯಾಕ್ ಮಾಡಲಾಗಿರಲಿಲ್ಲ, ಹಾರ್ಡವೇರ್ ತೊಂದರೆ ಕಾರಣವಾಗಿತ್ತು ಎಂದು ಸರಕಾರವು ಬಳಿಕ ಹೇಳಿಕೆಯಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News