×
Ad

ಉನ್ನಾವೊ, ಕಥುವಾ ಅತ್ಯಾಚಾರ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಧ್ವನಿಯೆತ್ತಿದ ಬಾಲಿವುಡ್

Update: 2018-04-12 19:41 IST

ಮುಂಬೈ,ಎ.12: ಉನ್ನಾವೊ ಮತ್ತು ಕಥುವಾ ಅತ್ಯಾಚಾರ ಪ್ರಕರಣಗಳ ವಿರುದ್ಧ ತೀವ್ರ ಆಕ್ರೋಶ, ದುಃಖವನ್ನು ವ್ಯಕ್ತಪಡಿಸಿರುವ ಬಾಲಿವುಡ್ ಗಣ್ಯರು ಆರೋಪಿಗಳ ವಿರುದ್ಧ ತ್ವರಿತ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.

ಜಾವೇದ್ ಅಖ್ತರ್, ಅಭಿಷೇಕ್ ಬಚ್ಚನ್, ಸ್ವರಾ ಭಾಸ್ಕರ ಮತ್ತು ಹಂಸಲ್ ಮೆಹ್ತಾ ರಂತಹ ಸೆಲೆಬ್ರಿಟಿಗಳು ಇಡೀ ರಾಷ್ಟ್ರಕ್ಕೆ ಆಘಾತವನ್ನುಂಟು ಮಾಡಿರುವ ಇವೆರಡು ಘಟನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕಟುವಾಗಿ ಖಂಡಿಸಿದ್ದಾರೆ.

ಮಹಿಳೆಯರ ಹಕ್ಕುಗಳನ್ನು ಬೆಂಬಲಿಸಲು ಜನರು ಮುಂದಾಗಬೇಕಾದ ಕಾಲವೀಗ ಬಂದಿದೆ. ಮಹಿಳೆಯರಿಗೆ ನ್ಯಾಯ ದೊರೆಯಬೇಕೆಂದು ಬಯಸುವ ಎಲ್ಲರೂ ಈಗ ಎದ್ದು ನಿಲ್ಲಬೇಕಿದೆ ಮತ್ತು ಉನ್ನಾವೊ ಹಾಗೂ ಕಥುವಾಗಳ ಅತ್ಯಾಚಾರಿಗಳು ಮತ್ತು ಅವರ ರಕ್ಷಕರ ವಿರುದ್ಧ ತಮ್ಮ ಧ್ವನಿಗಳನ್ನೆತ್ತಬೇಕಾಗಿದೆ ಎಂದು ಕವಿ-ಸಾಹಿತಿ ಜಾವೇದ್ ಅಖ್ತರ್ ಬರೆದಿದ್ದಾರೆ.

ಸಂತ್ರಸ್ತೆಯ ತಂದೆಯನ್ನು ಥಳಿಸಿ ಸಾವಿಗೆ ಕಾರಣನಾಗಿದ್ದಕ್ಕೆ ಉನ್ನಾವೊದಲ್ಲಿ ಅತ್ಯಾಚಾರ ಆರೋಪಿಯ ಸೋದರನನ್ನು ಬಂಧಿಸಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಈವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಅತ್ಯಾಚಾರ ಆರೋಪವನ್ನು ಹೊತ್ತಿರುವ ಶಾಸಕ ಮುಕ್ತವಾಗಿ ತಿರುಗಾಡುತ್ತಿದ್ದಾನೆ ಮತ್ತು ಸಂತ್ರಸ್ತ ಕುಟುಂಬವನ್ನು ಕೆಳವರ್ಗದ ಜನರು ಎಂದು ಕರೆಯುವ ಎದೆಗಾರಿಕೆಯನ್ನು ತೋರಿಸುತ್ತಿದ್ದಾನೆ ಎಂದು ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಥುವಾದಲ್ಲಿ ಅತ್ಯಾಚಾರ-ಕೊಲೆ ಪ್ರಕರಣದ ಬಲಿಪಶು ಎಂಟರ ಹರೆಯದ ಬಾಲಕಿಯ ಚಿತ್ರವನ್ನು ಅಭಿಷೇಕ್ ಶೇರ್ ಮಾಡಿಕೊಂಡಿದ್ದಾರೆ ಮತ್ತು ಆಕೆಯ ಹೆಸರನ್ನು ಹ್ಯಾಷ್‌ಟ್ಯಾಗ್ ಮಾಡಿದ್ದಾರೆ.

ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಹಾಗೂ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿ ಬಿಜೆಪಿಯ ಪ್ರತಿಭಟನೆಯ ವಿವರಗಳಿರುವ ನ್ಯೂಯಾರ್ಕ್ ಟೈಮ್ಸ್‌ನಲ್ಲಿಯ ವರದಿಯನ್ನು ರಿಟ್ವೀಟ್ ಮಾಡಿರುವ ನಿರ್ದೇಶಕ ಹಂಸಲ್ ಮೆಹ್ತಾ, ಇದು ರಾಷ್ಟ್ರೀಯವಾದವೇ ಎಂದು ಪ್ರಶ್ನಿಸಿದ್ದಾರೆ. ನಟಿ ಸೋನಂ ಕಪೂರ್ ಕೂಡ್ ಇದೇ ವರದಿಯನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿ, ನಕಲಿ ರಾಷ್ಟ್ರೀಯವಾದಿಗಳ ವಿರುದ್ಧ ಆಕ್ರೋಶವನ್ನು ಕಾರಿದ್ದಾರೆ.

ಎಂಟರ ಹರೆಯದ ಪುಟ್ಟ ಬಾಲಕಿ ಆ ಕ್ರೌರ್ಯವನ್ನು ಅನುಭವಿಸುತ್ತಿದ್ದಾಗ ಆಕೆಯ ಮನಃಸ್ಥಿತಿ ಹೇಗಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಿ. ನಿಮಗೆ ಅವಳ ಭೀತಿಯ ಅನುಭವವಾಗದಿದ್ದರೆ ನೀವು ಮನುಷ್ಯರಲ್ಲ. ನೀವು ಆಕೆಗೆ ನ್ಯಾಯಕ್ಕಾಗಿ ಆಗ್ರಹಿಸದಿದ್ದರೆ ನೀವು ಯಾವುದಕ್ಕೂ ಸೇರಿದವರಲ್ಲ ಎಂದು ನಟ-ನಿರ್ಮಾಪಕ ಫರ್ಹಾನ್ ಅಖ್ತರ್ ಟ್ವೀಟಿಸಿದ್ದಾರೆ.

ಬಾಲಕಿ ಮುಸ್ಲಿಂ ಬುಡಕಟ್ಟು ಸಮುದಾಯಕ್ಕೆ ಸೇರಿದ ಕಾರಣದಿಂದ ಆಕೆಯ ಅತ್ಯಾಚಾರ ಮತ್ತು ಕೊಲೆ ನಡೆದಿದೆ. ಸಂಘಪರಿವಾರದವರು ಈ ಸಮುದಾಯವನ್ನು ತಮ್ಮ ಪ್ರದೇಶದಿಂದ ಒಕ್ಕಲೆಬ್ಬಿಸಲು ಬಯಸಿದ್ದರು ಎಂದು ಸ್ವರ ಭಾಸ್ಕರ್ ಬರೆದಿದ್ದಾರೆ.

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಆರೋಪಿಗಳ ವಿರುದ್ಧ ಹೋರಾಟಕ್ಕೆ ಒಂದಾಗುವಂತೆ ಹಾಸ್ಯನಟ ವೀರ ದಾಸ್ ಅವರು ಜನರನ್ನು ಕೋರಿದ್ದಾರೆ.

ಎಂಟರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ನಡೆದಿದೆ. ಇನ್ನೋರ್ವ ಅತ್ಯಾಚಾರ ಸಂತ್ರಸ್ತೆ ತನಗಾಗಿ ಮತ್ತು ಜೈಲಿನಲ್ಲಿ ಸತ್ತ ತನ್ನ ತಂದೆಗೆ ನ್ಯಾಯಕ್ಕಾಗಿ ಹೋರಾಡುತ್ತಿದ್ದಾಳೆ. ಧ್ವನಿಯೆತ್ತುವುದು ಇಲ್ಲವೇ ಮೌನಪ್ರೇಕ್ಷಕರಾಗಿರುವುದು ನಮಗಿರುವ ಆಯ್ಕೆಗಳಾಗಿವೆ. ನೀವು ಒಂಟಿಯಾಗಿದ್ದರೂ ಸರಿಯೇ, ನ್ಯಾಯದ ಪರವಾಗಿ ಎದ್ದು ನಿಲ್ಲಿ ಎಂದು ನಟ ರಿತೇಶ್ ದೇಶಮುಖ್ ಟ್ವೀಟಿಸಿದ್ದಾರೆ.

ನಿರ್ಮಾಪಕ ಶಿರೀಷ್ ಕುಂದರ್, ನಟ ರಾಹುಲ್ ಬೋಸ್, ಟಿಸ್ಕಾ ಚೋಪ್ರಾ, ರಿಚಾ ಛಡ್ಡಾ, ರಣವೀರ್ ಶೋರೆ ಮತ್ತಿತರರೂ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶವನ್ನು ತೋಡಿಕೊಂಡು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News