ಪ.ಬಂಗಾಲ: ಪಂಚಾಯತ್ ಚುನಾವಣೆ ಘರ್ಷಣೆಗೆ ಇಬ್ಬರು ಬಲಿ

Update: 2018-04-12 17:46 GMT
ಸಾಂದರ್ಭಿಕ ಚಿತ್ರ

ಕೋಲ್ಕತಾ, ಎ.12: ಪಶ್ಚಿಮ ಬಂಗಾಲದಲ್ಲಿ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಂತಿಮ ದಿನಾಂಕವನ್ನು ವಿಸ್ತರಿಸಿದ ಕುರಿತ ವಿವಾದ ತಾರಕಕ್ಕೇರಿದ್ದು, ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಟಿಎಂಸಿ ಮುಖಂಡನನ್ನು ವ್ಯಕ್ತಿಯೋರ್ವ ಚೂರಿಯಿಂದ ಇರಿದು ಕೊಲೆ ಮಾಡಿದ್ದರೆ, ಆತನ ಬೆಂಬಲಿಗರು ಆಕ್ರಮಣ ನಡೆಸಿದ ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿದ್ದಾರೆ. ಫೋಲ್ತಿ ಬೆಲಿಯಘಟ ಗ್ರಾಮಪಂಚಾಯತ್‌ನಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಅಭ್ಯರ್ಥಿಗಳು 16 ಸ್ಥಾನಗಳಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಎಂಸಿ ಮುಖಂಡರು ಬುಧವಾರ ಗ್ರಾಮದಲ್ಲಿ ವಿಜಯೋತ್ಸವ ಮೆರವಣಿಗೆ ಹಮ್ಮಿಕೊಂಡಿದ್ದರು.

ಸುಮಾರು 3,000ಕ್ಕೂ ಹೆಚ್ಚು ಮಂದಿ ವೆುರವಣಿಗೆಗೆ ಸಿದ್ಧರಾಗಿದ್ದರು. ಈ ವೇಳೆ ರಜಬ್ ಆಲಿ ಎಂಬ ವ್ಯಕ್ತಿ ಗುಂಪಿನೆಡೆಗೆ ಧಾವಿಸಿ ಬಂದು ತೃಣಮೂಲ ಕಾಂಗ್ರೆಸ್ ಮುಖಂಡ ಸೈಫುರ್ ರೆಹ್ಮಾನ್ ಮೇಲೆ ಚೂರಿಯಿಂದ ದಾಳಿ ನಡೆಸಿದ್ದಾನೆ. ಗುಂಪಿನಲ್ಲಿದ್ದವರು ಅನಿರೀಕ್ಷಿತ ಘಟನೆಯಿಂದ ಎಚ್ಚೆತ್ತುಕೊಳ್ಳುವ ಮೊದಲೇ ಮತ್ತೊಮ್ಮೆ ದಾಳಿ ನಡೆಸಿ ರೆಹ್ಮಾನ್ ಅವರ ಹೊಟ್ಟೆಯನ್ನು ಬಗೆದಿದ್ದು ಕರುಳು ಹೊರಬಂದಿದೆ. ವಿಪರೀತ ರಕ್ತಸ್ರಾವದಿಂದ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಮಧ್ಯೆ, ರೊಚ್ಚಿಗೆದ್ದ ಗುಂಪು ರಜಬ್ ಆಲಿಯ ಮೇಲೆ ಮುಗಿಬಿದ್ದು ಥಳಿಸಿದ್ದು ಆತ ಕೂಡಾ ಮೃತಪಟ್ಟಿದ್ದಾನೆ. ಈ ಘಟನೆಯ ಬಳಿಕ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News