ವಧೆಗಾಗಿ ಜಾನುವಾರು ಮಾರಾಟ ನಿಷೇಧ ತೆರವು: ಪ್ರಾಣಿಗಳ ಮೇಲಿನ ಹಿಂಸೆ ತಡೆ ಕಾಯ್ದೆಗೆ ತಿದ್ದುಪಡಿ
ಹೊಸದಿಲ್ಲಿ, ಎ.12: ವಧೆಗಾಗಿ ಜಾನುವಾರುಗಳನ್ನು ಮಾರಾಟ ಮಾಡುವುದರ ಮೇಲೆ ಕೇಂದ್ರ ಸರಕಾರ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಿದ್ದು ಈ ಸಂಬಂಧ ಹಿಂದಿನ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ. ಕಳೆದ ವರ್ಷ ಮೇನಲ್ಲಿ ಕೇಂದ್ರ ಸರಕಾರವು ದೇಶಾದ್ಯಂತ ವಧಾಗೃಹಗಳಿಗೆ ಜಾನುವಾರುಗಳನ್ನು ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಿತ್ತು.
ಆದರೆ ಇದೀಗ ಪಶು ಮಾರುಕಟ್ಟೆ ನಿಯಮ 2018ರಲ್ಲಿ ಪ್ರಾಣಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆಗೆ ಹೊಸ ತಿದ್ದುಪಡಿಗಳನ್ನು ತರಲಾಗಿದ್ದು ಹಳೆಯ ನಿಯಮವನ್ನು ತೆಗೆದು ಹಾಕಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ನಿಯಮಗಳು 30 ದಿನಗಳ ವರೆಗೆ ಸಾರ್ವಜನಿಕರು ತಮ್ಮ ಅನಿಸಿಕೆಗಳನ್ನು ತಿಳಿಸಲು ಲಭ್ಯವಾಗಲಿದೆ. ನಂತರ ಅವುಗಳನ್ನು ಕಾನೂನಾಗಿ ಬದಲಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ನೂತನ ಕಾಯ್ದೆಯ ಪ್ರಕಾರ, ಪ್ರತಿಯೊಂದು ಜಿಲ್ಲೆಯಲ್ಲಿ ಪ್ರಾಣಿ ದೌರ್ಜನ್ಯ ತಡೆ ಸಮಿತಿಯನ್ನು ರಚಿಸಲಾಗುವುದು. ಆಮೂಲಕ ಜಾನುವಾರು ಮಾರುಕಟ್ಟೆಯಲ್ಲಿ ಪ್ರಾಣಿಗಳಿಗೆ ಅನಗತ್ಯ ಹಿಂಸೆ ಅಥವಾ ನೋವು ನೀಡಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು.
ಪ್ರಾಣಿಗಳ ಮಾರಾಟವನ್ನು ಸರಿಯಾಗಿ ನೋಂದಾಯಿಸಲಾಗಿದೆ ಮತ್ತು ಈ ಮಾರುಕಟ್ಟೆಗಳಲ್ಲಿ ಸೂಕ್ತ ವ್ಯವಸ್ಥೆಗಳಿವೆ ಎಂಬ ಬಗ್ಗೆಯೂ ಈ ಸಮಿತಿಗಳು ಪರಿಶೀಲನೆ ನಡೆಸಲಿವೆ. ಅಂತರ್‌ರಾಷ್ಟ್ರೀಯ ಗಡಿಗಳ ಸಮೀಪದಲ್ಲಿರುವ ಜಾನುವಾರು ಮಾರುಕಟ್ಟೆಗಳ ಮೂಲಕ ಸೂಕ್ತ ನಿಯಮಗಳನ್ನು ಪಾಲಸದ ಹೊರತು ಜಾನವಾರುಗಳನ್ನು ಗಡಿ ದಾಟದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನೂ ಈ ಸಮಿತಿಗಳಿಗೆ ನೀಡಲಾಗಿದೆ. ಆದರೆ, ಅಂತಾರಾಷ್ಟ್ರೀಯ ಗಡಿಯ 50 ಕಿ.ಮೀ ಮತ್ತು ರಾಜ್ಯ ಗಡಿಯ 25 ಕಿ.ಮೀ ವ್ಯಾಪ್ತಿಯೊಳಗೆ ಜಾನುವಾರು ಮಾರುಕಟ್ಟೆಗಳು ಇರುವ ಹಾಗಿಲ್ಲ ಎಂಬ ಈ ಹಿಂದಿನ ನಿಬಂಧನೆಯನ್ನು ನೂತನ ಕಾಯ್ದೆಯಲ್ಲಿ ತೆಗೆದುಹಾಕಲಾಗಿದೆ.