ಉಡುಪಿ: ಬಿಜೆಪಿ ಟಿಕೆಟ್‌ಗಾಗಿ ದೇವರಿಗೆ ಮೊರೆ ಹೋದ ರಘುಪತಿ ಭಟ್ ಬೆಂಬಲಿಗರು

Update: 2018-04-17 10:38 GMT

ಉಡುಪಿ, ಎ.17: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಈಗಾಗಲೇ ಪ್ರಕಟಿಸಿರುವ ಎರಡನೇ ಪಟ್ಟಿಯಲ್ಲೂ ಸ್ಥಾನ ಪಡೆಯಲು ವಿಫಲವಾಗಿರುವ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪರವಾಗಿ ಅವರ ಅಭಿಮಾನಿಗಳು, ಬೆಂಬಲಿಗರು ಹಾಗೂ ಕುಟುಂಬಸ್ಥರು, ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಲು ಮೂರನೇ ಪಟ್ಟಿಯಲ್ಲಾದರೂ ಸ್ಥಾನ ಪಡೆಯಲು ಇದೀಗ ಉಡುಪಿಯ ವಿವಿಧ ದೇವರುಗಳ ಮೊರೆ ಹೋಗಿದ್ದಾರೆ.

ಉಡುಪಿ ಕ್ಷೇತ್ರದ ಕಾರ್ಯಕರ್ತರ ಹಾಗೂ ಬಿಜೆಪಿ ಪದಾಧಿಕಾರಿಗಳ ಒಮ್ಮತದ ಅಭ್ಯರ್ಥಿಯಾಗಿರುವ ಕೆ.ರಘುಪತಿ ಭಟ್ ಅವರಿಗೆ ಉಡುಪಿಯಿಂದ ಟಿಕೆಟ್‌ ಗ್ಯಾರಂಟಿ ಎಂದೇ ಭಾವಿಸಲಾಗಿತ್ತು. ಆದರೆ ಈವರೆಗೆ ಬಿಜೆಪಿ ಹೈಕಮಾಂಡ್ ಪ್ರಕಟಿಸಿರುವ ಎರಡು ಪಟ್ಟಿಯಲ್ಲೂ ಉಡುಪಿಗೆ ಅಭ್ಯರ್ಥಿ ಹೆಸರನ್ನು ಘೋಷಿಸದಿರುವುದರಿಂದ ಭಟ್‌ರ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಇದರಿಂದ ಇನ್ನು ರಘುಪತಿ ಭಟ್ ಅವರಿಗೆ ಟಿಕೆಟ್‌ ದೊರೆಯುವ ಅವಕಾಶ ಕ್ಷೀಣ ಎಂದು ಭಾವಿಸಿರುವ ಅವರು, ಕೊನೆಯ ಅಸ್ತ್ರವಾಗಿ ಈಗ ಟಿಕೆಟ್‌ಗಾಗಿ ನೇರವಾಗಿ ದೇವರಿಗೆ ಮೊರೆ ಹೋಗಿದ್ದಾರೆ.

ಅವರ ಅಭಿಮಾನಿಗಳು, ಬೆಂಬಲಿಗರು ಅಲ್ಲದೇ ಬಿಜೆಪಿ ಯುವ ಮೋರ್ಚಾ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಂಘ, ಉಡುಪಿ ಜಿಲ್ಲಾ ಹವ್ಯಕ ಸಭಾದ ಪದಾಧಿಕಾರಿಗಳು ಇಂದು ಉಡುಪಿಯಲ್ಲಿ ಶ್ರೀಅನಂತೇಶ್ವರ, ಶ್ರೀಚಂದ್ರ ಮೌಳೀಶ್ವರ ಹಾಗೂ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ, ರಘುಪತಿ ಭಟ್ ಅವರಿಗೆ ಟಿಕೇಟ್‌ನ್ನು ಖಚಿತ ಪಡಿಸುವುದರೊಂದಿಗೆ, ಅವರು ಭಾರೀ ಬಹುಮತದಿಂದ ಗೆದ್ದುಬರುವಂತೆ ಪ್ರಾರ್ಥಿಸಿದರು. ಬಿಜೆಪಿಯ ಕಾರ್ಯಕರ್ತರೊಂದಿಗೆ ರಘುಪತಿ ಭಟ್ ಅವರ ತಾಯಿ ಸರಸ್ವತಿ ಬಾರಿತ್ತಾಯ, ಪತ್ನಿ ಶಿಲ್ಪ ರಘುಪತಿ, ಪುತ್ರ ರಿಹಾಂಶು, ಸಹೋದರ ರಮೇಶ್ ಬಾರಿತ್ತಾಯ ಸಹ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಇದರೊಂದಿಗೆ ಮಲ್ಪೆ ವಡಬಾಂಡೇಶ್ವರದ ಬಲರಾಮ ದೇವಸ್ಥಾನ ಹಾಗೂ ಬ್ರಹ್ಮಾವರದ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲೂ ಆಯಾ ಭಾಗಗಳ ಬಿಜೆಪಿ ಕಾರ್ಯಕರ್ತರು, ಯುವಮೋರ್ಚಾ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ ತಮ್ಮ ನಾಯಕನಿಗೆ ಟಿಕೇಟ್‌ನ್ನು ಖಾತ್ರಿಪಡಿಸಲು ಕೋರಿಕೆ ಸಲ್ಲಿಸಿದರು.

ಆರೆಸ್ಸೆಸ್ ಒಲವು?: ಕಾಂಗ್ರೆಸ್‌ನಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸ್ಪರ್ಧಿಸುವ ಉಡುಪಿ ಕ್ಷೇತ್ರದಿಂದ ಬಿಜೆಪಿ ಪರವಾಗಿ ರಘುಪತಿ ಭಟ್ ಸೇರಿದಂತೆ ಹಲವು ಆಕಾಂಕ್ಷಿಗಳ ಹೆಸರು ಕೇಳಿಬಂದಿತ್ತು. ಇವುಗಳಲ್ಲಿ ಉದಯಕುಮಾರ್ ಶೆಟ್ಟಿ, ಸುಪ್ರಸಾದ್ ಶೆಟ್ಟಿ, ಯಶಪಾಲ್‌ಸುವರ್ಣ ಅಲ್ಲದೇ ಇತ್ತೀಚೆಗೆ ನಯನ ಗಣೇಶ್ ಅವರ ಹೆಸರನ್ನು ತೇಲಿ ಬಿಡಲಾಗಿತ್ತು. ಈ ನಡುವೆ ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಅಭಿಮತವನ್ನು ಪಡೆದಾಗ ರಘುಪತಿ ಭಟ್ ಅವರ ಕೈಮೇಲಾಗಿ ಅವರಿಗೆ ಟಿಕೇಟ್ ಖಾತ್ರಿ ಎನ್ನಲಾಗಿತ್ತು. ಆದರೆ ಈಗಾಗಲೇ ಪ್ರಕಟವಾಗಿರುವ ಎರಡು ಪಟ್ಟಿಗಳಲ್ಲೂ ಅವರ ಹೆಸರು ಕಾಣಿಸಿಕೊಳ್ಳದೇ ಹೋದಾಗ ಇದರ ಹಿಂದೆ ಆರೆಸ್ಸೆಸ್ ಪಾತ್ರದ ಸಂಶಯ ಮೂಡಿದೆ.

ಆರೆಸ್ಸೆಸ್ ಬೆಂಬಲಿತ ವ್ಯಕ್ತಿ ಇಲ್ಲಿ ಟಿಕೇಟ್ ಪಡೆಯುವ ನಿರೀಕ್ಷೆ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಭಟ್ ಬೆಂಬಲಿಗರು ‘ಉಡುಪಿ ಶ್ರೀಕೃಷ್ಣ’ನ ಮೂಲಕ ಬಿಜೆಪಿ ‘ದೇವರು’ಗಳನ್ನು ಒಲಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.ಉಡುಪಿ ಶ್ರೀಕೃಷ್ಣ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಉಪಾಧ್ಯಕ್ಷ ರಾಘವೇಂದ್ರ ಕಿಣಿ, ನಮ್ಮೆಲ್ಲರ ಒಮ್ಮತದ ಅಭ್ಯರ್ಥಿಯಾಗಿರುವ ರಘುಪತಿ ಭಟ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗುವ ವಿಶ್ವಾಸವಿದ್ದು, ಇದಕ್ಕೆ ಪೂರಕವಾಗಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಕೃಷ್ಣ, ಅನಂತೇಶ್ವರ, ಚಂದ್ರವೌಳೀಶ್ವರನ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಟ್‌ರಿಗೆ ಟಿಕೆಟ್ ಸಿಗುವಂತೆ, ಶಾಸಕರಾಗಿ ಆಯ್ಕೆಯಾಗಿ ಉಡುಪಿ ಜನತೆಯ ಸೇವೆ ಅವಕಾಶ ಸಿಗಲಿ ಎಂದು ಪ್ರಾರ್ಥಿಸಿಕೊಂಡಿದ್ದೇವೆ ಎಂದರು.

ಈ ಸಂದರ್ಭ ಪಕ್ಷದ ಹಿರಿಯರಾದ ಬಿ.ಸೋಮಶೇಖರ್ ಭಟ್, ವಿಶ್ವನಾಥ ಭಟ್, ಜಿಪಂ ಅಧ್ಯಕ್ಷ ದಿನಕರಬಾಬು, ಶ್ರೀಶ ನಾಯಕ್, ಶರತ್, ಮಹೇಶ್ ಠಾಕೂರ್, ಪ್ರಭಾಕರ ಪೂಜಾರಿ, ವಾಸುದೇವ ಭಟ್ ಪೆರಂಪಳ್ಳಿ, ರಶ್ಮಿತಾ ಬಾಲಕೃಷ್ಣ, ಗೀತಾ ಸೇಟ್, ಮಂಜುನಾಥ ಉಪಾಧ್ಯ, ಶ್ರೀನಿವಾಸ ಬಲ್ಲಾಳ್, ಸದಾಶಿವ ರಾವ್, ವಿಠಲ ಕರ್ಕೇರ, ನಾಗೇಶ್ ಸಾಲ್ಯಾನ್, ಯೋಗೀಶ್ ಮಲ್ಪೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News