ಪದ್ಮಭೂಷಣ ಪುರಸ್ಕೃತ ಹಿರಿಯ ಪತ್ರಕರ್ತ ಟಿ.ವಿ.ಆರ್.ಶೆಣೈ ನಿಧನ

Update: 2018-04-17 18:12 GMT

ಮಣಿಪಾಲ, ಎ.17: ಆಂಗ್ಲ ಭಾಷಾ ಸಾಪ್ತಾಹಿಕ ‘ದಿ ವೀಕ್’ನ ಮಾಜಿ ಸಂಪಾದಕ, ನಾಡಿನ ಖ್ಯಾತನಾಮ ಹಿರಿಯ ಪತ್ರಕರ್ತ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಟಿ.ವಿ.ಆರ್.ಶೆಣೈ ಮಂಗಳವಾರ ಸಂಜೆ 7:30ರ ಸುಮಾರಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 77 ವರ್ಷ ಪ್ರಾಯವಾಗಿತ್ತು.

ಮಣಿಪಾಲದ ಮಾಹೆ ಟ್ರಸ್ಟ್ ಹಾಗೂ ಡಾ.ಟಿ.ಎಂ.ಎ. ಫೌಂಡೇಶನ್‌ನ ಟ್ರಸ್ಟಿ ಆಗಿರುವ ಟಿ.ವಿ.ಆರ್. ಶೆಣೈ (77) ಕಿಡ್ನಿ ಸಂಬಂಧಿಸಿದ ಸಮಸ್ಯೆಗಾಗಿ ಕಳೆದ ಜ.29ರಿಂದ ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಮೂಲತಃ ಕೇರಳದ ಎರ್ನಾಕುಲಂ ಜಿಲ್ಲೆಯ ಚೆರಾಯಿಯವರಾದ ಟಿ.ವಿ.ಆರ್.ಶೆಣೈ ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮುಂಬೈಯ ಫ್ರೀ ಪ್ರೆಸ್ ಜರ್ನಲ್ ಪತ್ರಿಕೆಯ ವರದಿಗಾರರಾಗಿ ತಮ್ಮ ವೃತ್ತಿ ಬದುಕು ಆರಂಭಿಸಿದ ಶೆಣೈ, ಬಳಿಕ 60ರ ದಶಕದಲ್ಲಿ ‘ಮಲಯಾಳಂ ಮನೋರಮಾ’ ಪತ್ರಿಕೆಯ ಹೊಸದಿಲ್ಲಿ ಬ್ಯುರೋ ಮುಖ್ಯಸ್ಥರಾಗಿ ಬಹುಕಾಲ ಕಾರ್ಯನಿರ್ವಹಿಸಿದರು. ಅದೇ ಗುಂಪಿನಿಂದ ‘ದಿ ವೀಕ್’ ಆಂಗ್ಲ ಸಾಪ್ತಾಹಿಕ ಪ್ರಾರಂಭಗೊಂಡಾಗ ಅವರು ಅದರ ಬ್ಯುರೋ ಮುಖ್ಯಸ್ಥರಾಗಿ, ಬಳಿಕ ಸಂಪಾದಕರಾಗಿ ನಿಯುಕ್ತಿಗೊಂಡು ಅದೇ ಹುದ್ದೆಯಲ್ಲಿ ಸೇವಾ ನಿವೃತ್ತರಾದರು. ಬಳಿಕ ಅವರು ಸ್ಪಲ್ಪಕಾಲ ಸಂಡೇ ಮೈಲ್‌ನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಶೆಣೈ 2003ರಲ್ಲಿ ಪದ್ಮಭೂಷಣ ಪ್ರಶಸ್ತಿಯಿಂದ ಸಮ್ಮಾನಿತರಾಗಿದ್ದರು.

ಹಾಸ್ಯಲೇಪಿತ, ಲಘುದಾಟಿಯ ಲೇಖನಗಳು ಶೆಣೈ ಅವರ ವೈಶಿಷ್ಟವೆನಿಸಿವೆ. ಇದರಿಂದಾಗಿ ‘ದಿ ವೀಕ್’ ಸೇರಿದಂತೆ ನಿವೃತ್ತಿ ಬಳಿಕ ಅನೇಕ ಪತ್ರಿಕೆ, ವೆಬ್‌ಸೈಟ್‌ಗಳಲ್ಲಿ ಅವರು ಬರೆಯುತ್ತಿದ್ದ ಅಂಕಣ ಬರಹಗಳು ಬಹು ಜನಪ್ರಿಯಗೊಂಡಿದ್ದವು. ಬಳಿಕ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಿಕೆ, ವೆಬ್‌ಸೈಟ್, ನಿಯತಿಕಾಲಿಕಗಳಲ್ಲಿ ರಾಷ್ಟ್ರೀಯ ರಾಜಕೀಯ, ಆರ್ಥಿಕತೆ, ಸಾಮಾಜಿಕ ಪರಿಣಾಮಕಾರಿ ವಿಷಯಗಳು, ಅಂತಾರಾಷ್ಟ್ರೀಯ ಸಂಗತಿಗಳ ಕುರಿತು ಪ್ರಸಕ್ತ ವಿದ್ಯಮಾನಗಳ ಕುರಿತು ಬರೆಯುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News