ಮಕ್ಕಾ ಮಸೀದಿ ಸ್ಫೋಟ: ಸರಕಾರಿ ಅಭಿಯೋಜಕರ ವೃತ್ತಿ ಜೀವನದ ಮೊದಲ ಕ್ರಿಮಿನಲ್ ಪ್ರಕರಣ!

Update: 2018-04-17 18:25 GMT

ಹೊಸದಿಲ್ಲಿ, ಎ.17: 2007ರಲ್ಲಿ ನಡೆದ ಹೈದರಾಬಾದ್ ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಐದು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾಗಿ ಆರೋಪಿಗಳ ಮೇಲಿದ್ದ ಆರೋಪಗಳನ್ನು ಸಾಬೀತುಪಡಿಸುವ ಜವಾಬ್ದಾರಿಯನ್ನು ಹೊಂದಿದ್ದ ಎನ್. ಹರಿನಾಥ್‌ಗೆ ಇದು ತಮ್ಮ ವೃತ್ತಿ ಜೀವನದ ಮೊದಲ ಕ್ರಿಮಿನಲ್ ಪ್ರಕರಣವಾಗಿತ್ತು ಎಂದು ತೆಲಂಗಾಣದ ವಕೀಲರು ತಿಳಿಸಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಎನ್.ಹರಿನಾಥ್ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿರುವ ಕಾರಣ ಅವರನ್ನು ಖುಲಾಸೆಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿತ್ತು. ಹರಿನಾಥ್ ತಾನು ಈ ಹಿಂದೆ ಜಾರಿ ನಿರ್ದೇಶನಾಲಯದ ಆರ್ಥಿಕ ಅಪರಾಧಗಳ ವಿಭಾಗದ ವಕೀಲರಾಗಿ ಕಾರ್ಯನಿರ್ವಹಿಸಿದ್ದೇನೆ. ಜೊತೆಗೆ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಮತ್ತು ಹತ್ಯೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಗಳಲ್ಲಿ ಸಿಬಿಐ ಪರವಾಗಿ ವಾದಿಸಿದ್ದೇನೆ. ಹಾಗಾಗಿ ಮಕ್ಕಾ ಮಸೀದಿ ಸ್ಫೋಟ ಪ್ರಕರಣವನ್ನು ನಿಬಾಯಿಸಲು ಸಮರ್ಥನಾಗಿದ್ದೇನೆ ಎಂದು ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದ ವೇಳೆ ತಿಳಿಸಿದ್ದರು. ವಿಶೇಷ ಅಭಿಯೋಜಕರಾದ ಉಜ್ವಲ್ ನಿಕಮ್ ಹಾಗೂ ಅಮರೇಂದ್ರ ಶರಣ್ ತಿಳಿಸಿರುವಂತೆ, ಮಕ್ಕಾ ಮಸೀದಿಯಂಥ ಭಯೋತ್ಪಾದನೆ ಸಂಬಂಧಿ ಪ್ರಕರಣಗಳನ್ನು ನಿಬಾಯಿಸಲು ಕ್ರಮಿನಿಲ್ ವಿಚಾರಣೆ ನಡೆಸಿರುವ ಕನಿಷ್ಟ ಹತ್ತು ವರ್ಷಗಳ ಅನುಭವ ಬೇಕಾಗುತ್ತದೆ. ಹರಿನಾಥ್ ಆಡಳಿತಾರೂಡ ಬಿಜೆಪಿಗೆ ಸಾಮೀಪ್ಯತೆ ಹೊಂದಿದ್ದು ಈ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರಾಗಿದ್ದರು ಎಂದೂ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News