ಸುರತ್ಕಲ್: ತಾತ್ಕಾಲಿಕ ಮಾರುಕಟ್ಟೆಯಲ್ಲಿ ಬೆಂಕಿ; ಎಂಟು ಅಂಗಡಿಗಳಿಗೆ ಹಾನಿ

Update: 2018-04-18 17:07 GMT

ಮಂಗಳೂರು, ಎ. 18: ಸುರತ್ಕಲ್‌ನಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಂಡಿರುವ ಮಾರುಕಟ್ಟೆ ಕಟ್ಟಡದಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಎರಡು ಅಂಗಡಿಗಳು ಸಂಪೂರ್ಣ ಬೆಂಕಿಹಾಹುತಿಯಾಗಿದ್ದು, ಮತ್ತೆರಡು ಅಂಗಡಿಗಳು ಭಾಗಶಃ ಹಾನಿಗೀಡಾಗಿವೆ.

ಬುಧವಾರ ಮುಂಜಾವ ಸುಮಾರು 1 ಗಂಟೆಗೆ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸುರತ್ಕಲ್ ಠಾಣಾ ಪೊಲೀಸರು ತಿಳಿಸಿದ್ದಾರೆ.

ಸುರತ್ಕಲ್‌ನಲ್ಲಿ ನೂತನವಾಗಿ ಮಾರುಕಟ್ಟೆ ಕಟ್ಟಡ ನಿರ್ಮಾಣಗೊಳ್ಳುವುದರಿಂದ ಆ ಸ್ಥಳದಲ್ಲಿದ್ದ ವ್ಯಾಪಾರಸ್ಥರು ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಮಾರುಕಟ್ಟೆ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಇದೀಗ ಕಟ್ಟಡಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ನಾಲ್ಕು ಅಂಗಡಿಗಳಲ್ಲಿ ಬೆಂಕಿ ವ್ಯಾಪಿಸಿದೆ. ಈ ಪೈಕಿ ಹಣ್ಣು ಹಂಪಲಿನ ಅಂಗಡಿ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಸಾವಿರಾರು ರೂ. ನಷ್ಟ ಸಂಭವಿಸಿದೆ. ಒಂದು ತರಕಾರಿಯ ಅಂಗಡಿ ಭಾಗಶಃ ಹಾನಿಗೀಡಾಗಿದ್ದು, ತರಕಾರಿಗಳು ಬೆಂಕಿಗಾಹುತಿಯಾಗಿವೆ. ಇನ್ನೊಂದು ಅಂಗಡಿ ಖಾಲಿಯಾಗಿದ್ದು, ವ್ಯಾಪಾರ ಸ್ಥಳಾಂತರಗೊಂಡಿರಲಿಲ್ಲ. ನಾಲ್ಕನೆಯ ಅಂಗಡಿಯಲ್ಲಿ ಒಳಗಿನ ಫರ್ನಿಚರ್ಸ್‌ ಅಳವಡಿಸುವ ಕಾರ್ಯ ನಡೆದಿತ್ತು ಎಂದು ಹೇಳಲಾಗಿದ್ದು, ಅಂಗಡಿಯ ಫರ್ನಿಚರ್‌ಗಳು ಬೆಂಕಿಗಾಹುತಿಯಾಗಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News