ದ.ಕ.: ಶಾಂತಿ ಸುವ್ಯವಸ್ಥೆ ಕಾಪಾಡುವ ಭರವಸೆ ಯಾರ ಪ್ರಣಾಳಿಕೆಯಲ್ಲಿದೆ?

Update: 2018-04-18 05:45 GMT

► ಸತತ 2 ತಿಂಗಳಿಗೂ ಅಧಿಕ ಕಾಲ ನಿಷೇಧಾಜ್ಞೆಯಿಂದ ತತ್ತರಿಸಿದ ಜಿಲ್ಲೆ

ಮಂಗಳೂರು, ಎ.17: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರು ತಮ್ಮ ಜನಪ್ರತಿನಿಧಿಗಳಿಂದ ಏನನ್ನು ನಿರೀಕ್ಷಿಸಬೇಕು? ಮತ ಕೇಳಲು ಮನೆಬಾಗಿಲಿಗೆ ಬರುವ ರಾಜಕಾರಣಿಗಳಲ್ಲಿ ಯಾವ ಬೇಡಿಕೆ ಈಡೇರಿಸಲು ಒತ್ತಾಯಿಸಬೇಕು? ಎಂಬ ಪ್ರಶ್ನೆ ಕೇಳಿದರೆ ಬುದ್ಧಿವಂತರ ಜಿಲ್ಲೆಯ ಜನರ ಮೊದಲ ಉತ್ತರ ‘‘ಇಲ್ಲಿ ಶಾಂತಿ, ಸುವ್ಯವಸ್ಥೆ, ಸೌಹಾರ್ದ ಕಾಪಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿ. ಆ ವಿಷಯದಲ್ಲಿ ಕಣ್ಣಿಗೆ ಮಣ್ಣೆರೆಚುವ ರಾಜಕೀಯ ಮಾಡಬೇಡಿ’’ ಎಂಬುದಾಗಿರುತ್ತದೆ.

 ಒಂದು ಸಮೀಕ್ಷೆಯ ಪ್ರಕಾರ ಜೀವನ ಗುಣಮಟ್ಟದ ಪಟ್ಟಿಯಲ್ಲಿ ಮಂಗಳೂರಿಗೆ ದೇಶದಲ್ಲೇ ಮೊದಲ ಸ್ಥಾನ. ಆರೋಗ್ಯ ಸೇವೆಯ ವಿಷಯದಲ್ಲಿ ವಿಶ್ವದಲ್ಲೇ ಮಂಗಳೂರಿಗೆ 12ನೇ ಸ್ಥಾನ. ಆದರೆ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಇಷ್ಟು ಉನ್ನತ ಸ್ಥಾನಮಾನ ಪಡೆದಿರುವ ಮಂಗಳೂರಿಗೆ ಬರುವಾಗ ‘‘ಇವತ್ತು ಬರಬಹುದಾ... ಪರಿಸ್ಥಿತಿ ಹೇಗಿದೆ?’’ ಎಂದು ಕೇಳಿಕೊಂಡು ಹೊರಡುವಂತಹ ಪರಿಸ್ಥಿತಿ ಇಲ್ಲಿ ಆಗಾಗ, ಇದ್ದಕ್ಕಿದ್ದಂತೆ ಸೃಷ್ಟಿಯಾಗುತ್ತದೆ. ಗೋವಿನ ಹೆಸರಲ್ಲಿ, ಹುಡುಗ - ಹುಡುಗಿ ಮಾತನಾಡಿದ ನೆಪದಲ್ಲಿ ಹಠಾತ್ತನೇ ಕೋಮು ಹಿಂಸಾಚಾರ ಹಬ್ಬುವ, ಅಮಾಯಕರು ಪ್ರಾಣ ಕಳೆದುಕೊಳ್ಳುವ, ಗಾಯಗೊಳ್ಳುವ, ನಿಷೇಧಾಜ್ಞೆ ಜಾರಿ ಯಾಗುವ, ಅಂಗಡಿ-ಮುಗ್ಗಟ್ಟು ಬಂದ್ ಆಗುವ, ಜನರು ಪ್ರಯಾಣಿಸಲು ಪರದಾಡುವ ಪರಿಸ್ಥಿತಿ ದ.ಕ. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಹಲವಾರು ಬಾರಿ ಉಂಟಾಗಿದೆ.

ಉಸ್ತುವಾರಿ ಸಚಿವರ ವೈಫಲ್ಯ: 2009ರಲ್ಲಿ ನಡೆದ ಪಬ್ ದಾಳಿ ಪ್ರಕರಣ ಮಂಗಳೂರಿನ ಪಾಲಿಗೆ ಅಳಿಸಲಾಗದ ಕಳಂಕವಾಗಿ ಇಂದಿಗೂ ಉಳಿದುಕೊಂಡಿದೆ. ಆಗ ರಾಜ್ಯದಲ್ಲಿದ್ದದ್ದು ಬಿಜೆಪಿ ಸರಕಾರ. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಉಸ್ತುವಾರಿ ಸಚಿವ ರಮಾನಾಥ ರೈ ಸಹಿತ ಕಾಂಗ್ರೆಸ್ ಅಭ್ಯರ್ಥಿಗಳೆಲ್ಲರೂ ಬಿಜೆಪಿಯಿಂದಾಗಿ ಮಂಗಳೂರು, ದಕ್ಷಿಣ ಕನ್ನಡದ ಹೆಸರು ಹಾಳಾಗಿದೆ. ನಾವು ಅಧಿಕಾರಕ್ಕೆ ಬಂದರೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಪ್ರಚಾರ ಮಾಡಿದರು. ರಮಾನಾಥ ರೈ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಸ್ಪರ್ಧೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ. ನಾನು ಅಧಿಕಾರಕ್ಕೆ ಬಂದರೆ ಭಟ್‌ರನ್ನು ಬಂಧಿಸಿ ಜೈಲಿಗೆ ಅಟ್ಟುತ್ತೇನೆ ಎಂದೇ ಹೇಳಿಕೊಂಡು ತಿರುಗಿದ್ದರು. ಚುನಾವಣೆಯಲ್ಲಿ ಗೆದ್ದ ರೈ ಜಿಲ್ಲೆಯ ಉಸ್ತುವಾರಿ ಸಚಿವರೂ ಆದರು. ಆದರೆ 5 ವರ್ಷಗಳ ಅವರ ಅಧಿಕಾರಾವಧಿಯ ಬಳಿಕ ಜಿಲ್ಲೆಯ ಪರಿಸ್ಥಿತಿ ನೋಡಿದರೆ ಮತ್ತೆ ಅದೇ ಗೋಳು.

ಜಿಲ್ಲೆಯಲ್ಲಿ ಶಾಂತಿ ಕದಡಲು ಪ್ರಮುಖ ಕಾರಣ ಪ್ರಚೋದನಾಕಾರಿ ಭಾಷಣಗಳು ಮತ್ತು ಅವುಗಳಿಗೆ ಇಲ್ಲದ ಕಡಿವಾಣ. ಕಳೆದ 5 ವರ್ಷಗಳಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಸಹಿತ ಸಂಘಪರಿವಾರದ ಜಗದೀಶ್ ಕಾರಂತ್, ಜಗದೀಶ್ ಶೇಣವ, ನಮೋ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ, ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಹಲವು ಮಂದಿ ಪ್ರಚೋದನಕಾರಿ ಭಾಷಣ ಮಾಡಿ ಸರಕಾರಕ್ಕೇ ಸವಾಲು ಹಾಕಿದ್ದರೂ ಅವರನ್ನು ಬಂಧಿಸಿ ಜೈಲಿಗೆ ಅಟ್ಟುವ ಧೈರ್ಯ ತೋರ ಲಿಲ್ಲ. ಬದಲಾಗಿ ತೋರ್ಪಡಿಕೆಗಾಗಿ ಕೆಲವು ಪ್ರಕರಣ ದಾಖಲಿಸಿ ಕೈ ತೊಳೆದುಕೊಂಡರು ಎಂಬ ಆರೋಪ ಈಗಲೂ ಕೇಳಿ ಬರುತ್ತಿದೆ. ಹಿಂದೂ ಜಾಗರಣ ವೇದಿಕೆಯ ಜಗದೀಶ್ ಕಾರಂತ್ ಪುತ್ತೂರಿನಲ್ಲಿ ಮಾತನಾಡಿ, ಪೊಲೀಸ್ ಅಧಿಕಾರಿಯನ್ನೇ ನಗ್ನ ಮೆರವಣಿಗೆ ಮಾಡುತ್ತೇನೆ, ಗಲಭೆ ಮಾಡಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿದರೂ ಅವರ ವಿರುದ್ಧ ಕೇಸ್ ದಾಖಲಿಸಲಿಲ್ಲ. ಒಂದು ವಾರದ ಬಳಿಕ ರಾಜ್ಯ ಗೃಹ ಸಚಿವರೇ ಹೇಳಿದ ಮೇಲೆ ಪ್ರಕರಣ ದಾಖಲಿಸಿದರೂ ಜಗದೀಶ್ ಕಾರಂತರನ್ನು ಮಧ್ಯಾಹ್ನ ಬಂಧಿಸಿ, ರಾತ್ರಿ ಬಿಡುಗಡೆ ಮಾಡಲಾಯಿತು.

ಗೂಂಡಾಗಿರಿಗಿಲ್ಲ ಕಡಿವಾಣ: ಒಂದೆಡೆ ಗ್ಯಾಂಗ್‌ವಾರ್, ಇನ್ನೊಂದೆಡೆ ಮರಳು ಮಾಫಿಯಾ, ಮತ್ತೊಂದೆಡೆ ಹಿಂದೂ-ಮುಸ್ಲಿಂ ಜೋಡಿಯನ್ನು ಕಂಡೊಡನೆ ಗೂಂಡಾಗಿರಿ ನಡೆಸಿ ಮತೀಯ ದ್ವೇಷ ಹೆಚ್ಚುವ ಪ್ರಕರಣ ಕೂಡ ಜಿಲ್ಲೆಯಲ್ಲಿ ಸಾಕಷ್ಟು ಕಡೆ ನಡೆದಿವೆ?. ಪ್ರತೀ ಬಾರಿಯೂ ಪೊಲೀಸರು ಪ್ರಕರಣ ದಾಖಲಿಸಿ ಕೈ ತೊಳೆಯುತ್ತಿದ್ದರೆ ವಿನಃ ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕ್ರಮ ಜರುಗಿಸುತ್ತಿರಲಿಲ್ಲ. ಘಟನೆ ತಣ್ಣಗಾದ ಮೇಲೆ ಸಚಿವ ರೈ ಶಾಂತಿ ಸಭೆ ನಡೆಸುತ್ತಿದ್ದರೇ ವಿನಃ ಸಕಾಲಕ್ಕೆ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸುತ್ತಿರಲಿಲ್ಲ ಎಂಬ ಆರೋಪವಿದೆ. ಇನ್ನು ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಕ್ರಮದ ಬಗ್ಗೆಯೂ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು.

ಬಂಟ್ವಾಳ ನಂ.1, ಉಳ್ಳಾಲ ನಂ.2: ಕೋಮು ಹಿಂಸೆಯ ವಿಷಯದಲ್ಲಿ ಉಳ್ಳಾಲವು ಬಂಟ್ವಾಳದ ಜೊತೆ ಸ್ಪರ್ಧೆಯಲ್ಲಿದೆ. ಅಲ್ಲಿ ಆಗಾಗ ಮತೀಯ ಗಲಭೆಗೆಳು ಘಟಿಸುತ್ತಲೇ ಇವೆ. ಇದಕ್ಕೆ ಬಲಿಯಾಗುವುದು ಕೂಡ ಅಮಾಯಕರೇ ಆಗಿದ್ದಾರೆ. ರಾಜು ಕೋಟ್ಯಾನ್, ಸಫ್ವಾನ್ ಉಳ್ಳಾಲ ಇವರೆಲ್ಲಾ ಮತೀಯವಾದಿಗಳ ಅಟ್ಟಹಾಸಕ್ಕೆ ಬಲಿಯಾದವರು. ಅನೇಕ ಬಾರಿ ಹಲ ವರಿಗೆ ಚೂರಿ ಇರಿತವಾಗಿದೆ. ಮನೆ, ಮಸೀದಿ, ಮಂದಿ ರಗಳಿಗೆ ಕಲ್ಲೆಸೆತವಾಗಿದೆ. ಇಲ್ಲಿ ಗೂಂಡಾ ಶಕ್ತಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದರೆ, ಹಲವು ಮಂದಿ ಅಮಾಯಕರ ಮೇಲೆ ಪ್ರಕರಣ ದಾಖಲಾಗಿದ್ದು, ಬಳ್ಳಾರಿ ಸಹಿತ ಹಲವು ಜೈಲಿನಲ್ಲಿ ಕಾಲ ಕಳೆಯುವಂತಾಯಿತು. ಗಾಂಜಾ ಮಾಫಿಯಾವಂತೂ ಇಲ್ಲಿ ಈಗಲೂ ಸಕ್ರಿಯ ವಾಗಿದೆ. ಸ್ವತಃ ಸಹೋದರಿ ಮತ್ತಾಕೆಯ ಪ್ರಿಯಕರನಿಂದ ಕೊಲೆಯಾದ ಕೊಣಾಜೆ-ಪಜೀರಿನ ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಂಸದ ನಳಿನ್ ಕುಮಾರ್ ಕಟೀಲು ಜಿಲ್ಲೆಗೆ ಬೆಂಕಿ ಹಾಕುವುದಾಗಿ ಹೇಳಿದ್ದರೂ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ ಕೈತೊಳೆದುಕೊಂಡರು.

ಈ ಬಾರಿಯಾದರೂ ಗೆದ್ದು ಅಧಿಕಾರಕ್ಕೆ ಬರುವ ವರು ಜಿಲ್ಲೆಯಲ್ಲಿ ಶಾಂತಿ ಕದಡುವವರ ವಿರುದ್ಧ ನಿರ್ದಾ ಕ್ಷಿಣ್ಯವಾಗಿ ಕ್ರಮ ಕೈಗೊಂಡು, ಜಾತಿ, ರಾಜಕೀಯ ಲೆಕಾ್ಕ ಚಾರ ನೋಡದೆ ದುಷ್ಕರ್ಮಿಗಳನ್ನು ಹೆಡೆ ಮುರಿಕಟ್ಟಿ, ಅಮಾಯಕರಿಗೆ ತೊಂದರೆ ನೀಡದಂತೆ ಕೆಲಸ ಮಾಡು ತ್ತೇವೆ ಎಂದು ಜಿಲ್ಲೆಯ ಜನರಿಗೆ ಭರವಸೆ ನೀಡುವರೇ? ಎಂದು ಕಾದು ನೋಡಬೇಕಿದೆ.

ಕಳೆದ 5 ವರ್ಷಗಳಲ್ಲಿ ದ.ಕ. ಜಿಲ್ಲೆಯಲ್ಲಿ ನಡೆದ ಕೆಲವು ಘಟನೆಗಳ ಅಂಕಿ ಅಂಶಗಳು (ವಿವಿಧ ಮೂಲಗಳಿಂದ)

ಸಂಘಪರಿವಾರದಿಂದ ನಡೆದ ಗೂಂಡಾಗಿರಿ      128
ಮುಸ್ಲಿಂ ಸಂಘಟನೆಗಳಿಂದ ನಡೆದ ಗೂಂಡಾಗಿರಿ            52
ಅಪರಿಚಿತ ಸಂಘಟನೆ/ವ್ಯಕ್ತಿಗಳಿಂದ ನಡೆದ ಗೂಂಡಾಗಿರಿ   11

ಕೋಮುಪ್ರಚೋದನಕಾರಿ ಭಾಷಣ

26
ಮತೀಯ ಪ್ರಕರಣ    404
ಮತಾಂತರ ಪ್ರಕರಣ -ಹಲ್ಲೆ   34
ಗೋ ಸಾಗಾಟ ಪ್ರಕರಣ-ಹಲ್ಲೆ 86       


ಕಲ್ಲಡ್ಕದಲ್ಲಿ ಸಚಿವ ರೈಗೇ ಸುರಕ್ಷತೆಯಿಲ್ಲ

2014ರ ಮಾರ್ಚ್ 8ರಂದು ಕಲ್ಲಡ್ಕದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ ‘ಸಾಮರಸ್ಯ ಸಭೆ’ಯ ವೇದಿಕೆಗೆ ಸಂಘಪರಿವಾರದ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದರು. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿದ್ದ ಸಚಿವ ರಮಾನಾಥ ರೈ ಈ ಸಂದರ್ಭ ಸ್ವತಃ ತನ್ನ ರಕ್ಷಣೆಗಾಗಿ ಕೆಲಕಾಲ ಪರದಾಡಿದ್ದರು.

ಅಮಾಯಕರ ಮೇಲೆ ಸುಳ್ಳು ಕೇಸು!

ಕಲ್ಲಡ್ಕಕೋಮು ಗಲಭೆಯ ಸಂದರ್ಭ ಪೊಲೀಸರು ಮುಸ್ಲಿಮ್ ಯುವಕರನ್ನೇ ಗುರಿಯಾಗಿಸಿ ನೂರಾರು ಮಂದಿಯನ್ನು ಸುಳ್ಳು ಪ್ರಕರಣಗಳಲ್ಲಿ ಫಿಕ್ಸ್ ಮಾಡಿ ಜೈಲಿಗೆ ಅಟ್ಟಿದ್ದರು ಎಂಬ ಆರೋಪವಿದೆ. 2017ರ ಜೂನ್ 13ರಂದು ಎರಡು ಗುಂಪುಗಳ ನಡುವೆ ನಡೆದ ಕಲ್ಲು ತೂರಾಟದ ಒಂದೇ ಪ್ರಕರಣದಲ್ಲಿ 83ಕ್ಕೂ ಹೆಚ್ಚು ಮುಸ್ಲಿಮ್ ಯುವಕರ ವಿರುದ್ಧ ಕೇಸು ದಾಖಲಾಗಿತ್ತು. ಅವರಲ್ಲಿ 33ಕ್ಕೂ ಹೆಚ್ಚು ಮಂದಿಯ ವಿರುದ್ಧ ಕೊಲೆಯತ್ನ (307)ದಂತಹ ಕಠಿಣ ಕಲಂನಡಿ ಪೊಲೀಸರು ಕೇಸು ದಾಖಲಿಸಿದ್ದರು. ಆದರೆ ಕೇಸರಿ ಪಡೆಯ ಬರೀ 23 ಮಂದಿಯ ವಿರುದ್ಧ ಕೇಸು ದಾಖಲಾಗಿತ್ತು. ಅವರಲ್ಲಿ 4 ಮಂದಿಯ ವಿರುದ್ಧ ಮಾತ್ರ 307 ಕೇಸ್ ಹಾಕಲಾಗಿತ್ತು. ಅಲ್ಲದೆ ಬಂಟ್ವಾಳ ಎಸ್ಸೈಗೆ ಕಲ್ಲು ಎಸೆದ ಆರೋಪದಲ್ಲಿ 24 ಅಮಾಯಕ ಮುಸ್ಲಿಮ್ ಯುವಕರ ಮೇಲೆ 307 ಕೇಸ್ ಹಾಕಲಾಗಿದೆ. ಇವರಲ್ಲಿ ಅಧಿಕ ಮಂದಿ ಕಾಂಗ್ರೆಸ್ ಕಾರ್ಯಕರ್ತರೇ ಆಗಿದ್ದಾರೆ. ಈ ಮಧ್ಯೆ ಸುಮಾರು 2 ತಿಂಗಳಿಗೂ ಅಧಿಕ ಕಾಲ ಬಂಟ್ವಾಳದಲ್ಲಿ ಸೆ.144 ಜಾರಿಗೊಳಿಸಲಾಗಿತ್ತು.

2013ರಲ್ಲಿ ರಮಾನಾಥ ರೈ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ಹೊತ್ತ ಬಳಿಕ ಜಿಲ್ಲೆಯಲ್ಲಿ ಹಲವು ಕೊಲೆ, ಕೊಲೆಯತ್ನ, ಮತೀಯ ಗಲಭೆ, ಮನೆ, ಅಂಗಡಿ-ಮುಂಗಟ್ಟು, ಮಂದಿರ-ಮಸೀದಿಗೆ ಕಲ್ಲೆಸೆತ, ನಿಷೇಧಾಜ್ಞೆ ಜಾರಿ ಇತ್ಯಾದಿ ನಡೆದಿವೆ. ಪತ್ರಿಕೆಗೆ ಲಭ್ಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಕಳೆದ 5 ವರ್ಷದಲ್ಲಿ ಮತೀಯ ದ್ವೇಷ ಮತ್ತಿತರ ಕಾರಣಕ್ಕಾಗಿ 30ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಬೆಂಜನಪದವಿನಲ್ಲಿ ಬಜರಂಗ ದಳದ ಕಾರ್ಯ ಕರ್ತರಾಗಿದ್ದ ರಾಜೇಶ್ ಪೂಜಾರಿ ಮತ್ತು ಮೂಡು ಬಿದಿರೆಯಲ್ಲಿ ಪ್ರಶಾಂತ್ ಪೂಜಾರಿ, ಬಂಟ್ವಾಳದ ಅಮಾಯಕ ಯುವಕ ಹರೀಶ್ ಪೂಜಾರಿ, ಮಂಗಳೂರು ಜೈಲಿನಲ್ಲಿ ಮಾಡೂರು ಯೂಸುಫ್ ಮತ್ತು ಗಣೇಶ್ ಶೆಟ್ಟಿ, ಕಾಂಗ್ರೆಸ್ ಕಾರ್ಯಕರ್ತ ನಾಸಿರ್ ಸಜಿಪ ಮಲಾಯಿಬೆಟ್ಟು, ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿ, ಅಶ್ರಫ್ ಕಲಾಯಿ, ಶರತ್ ಮಡಿವಾಳ, ಉಳ್ಳಾಲದಲ್ಲಿ ಮೀನುಗಾರ ರಾಜು ಕೋಟ್ಯಾನ್, ಸಫ್ವಾನ್ ಉಳ್ಳಾಲ, ಝುಬೈರ್ ಮುಕ್ಕಚ್ಚೇರಿ, ಮಂಗಳೂರಿನಲ್ಲಿ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ, ಕಾಟಿಪಳ್ಳದಲ್ಲಿ ದೀಪಕ್‌ರಾವ್, ಕೊಟ್ಟಾರ ಚೌಕಿಯಲ್ಲಿ ಬಶೀರ್ ಆಕಾಶಭವನ ಹೀಗೆ ಕೊಲೆಯಾದವರ ಪಟ್ಟಿ ಸಾಗುತ್ತದೆ. ಇದರಲ್ಲಿ ಮತೀಯ ದ್ವೇಷ, ಮರಳು ಮಾಫಿಯಾ, ಗಾಂಜಾ ಮಾಫಿಯಾ, ರೌಡಿ ಚಟುವಟಿಕೆಗಳಿಗೆ ಬಲಿಯಾದವರಿದ್ದಾರೆ.

ಜಲೀಲ್ ಕರೋಪಾಡಿಗೆ ಸಿಗದ ನ್ಯಾಯ

ಬಂಟ್ವಾಳ ತಾಲೂಕಿನ ಕಾಂಗ್ರೆಸ್ ಯುವ ನಾಯಕ, ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕರೋಪಾಡಿ ಹತ್ಯೆಯ ಪ್ರಮುಖ ಆರೋಪಿಗಳ ಬಂಧನ ಈವರೆಗೆ ಆಗಿಲ್ಲ. ಪೊಲೀಸರು ನಿಗದಿತ ಸಮಯದೊಳಗೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸದ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಬಂಧಿತರಾದ 12 ಆರೋಪಿಗಳು ಸುಲಭವಾಗಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಅಲ್ಲದೆ ಅಂದಿನ ಐಜಿ ಆರೋಪಿಗಳ ವಿರುದ್ಧ ಹಾಕಿದ್ದ ಕಠಿಣ ಕಾಯ್ದೆಯನ್ನು ಕೂಡಾ ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ರದ್ದುಗೊಳಿಸಿದ್ದರು. ಇದು ಬಂಟ್ವಾಳ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರಲ್ಲೇ ಭಾರೀ ಅಸಮಾಧಾನ ಉಂಟು ಮಾಡಿದೆ. ತನ್ನ ಆಪ್ತನ ಹತ್ಯೆ ಪ್ರಕರಣದಲ್ಲೇ ಸಚಿವ ರಮಾನಾಥ ರೈ ಆರೋಪಿಗಳ ಪರ ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಅಸಮಾಧಾನ ಕಾಂಗ್ರೆಸ್ ಕಾರ್ಯಕರ್ತರಲ್ಲೇ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News