×
Ad

ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಮತ್ತೊಂದು ದೋಷ: ಸಾಕ್ಷಿಗಳು ಅಸೀಮಾನಂದನಿಗೆ ನಿಕಟವಾಗಿದ್ದರು

Update: 2018-04-18 23:59 IST

ಹೊಸದಿಲ್ಲಿ, ಎ.18: ಹೈದರಾಬಾದ್‌ನ ಚಾರಿತ್ರಿಕ ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸ್ವಾಮಿ ಅಸೀಮಾನಂದ ಹಾಗೂ ಇತರ ನಾಲ್ವರನ್ನು ಖುಲಾಸೆಗೊಳಿಸಿರುವುದು ತನಿಖಾ ಸಂಸ್ಥೆಯ ಅಸಾಮರ್ಥ್ಯವನ್ನು ಬಯಲುಗೊಳಿಸಿದೆ ಎಂದು ಹಲವೆಡೆಯಿಂದ ಟೀಕೆ ವ್ಯಕ್ತವಾಗಿದೆ.

   ಈ ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಮಿತಿ(ಎನ್‌ಐಎ) ನ್ಯಾಯಾಲಯದಲ್ಲಿ ವಾದ ಮಂಡಿಸಲು ನಿಯೋಜಿಸಿದ ವಕೀಲರು ಕೊಲೆ ಪ್ರಕರಣದ ವಿಚಾರಣೆಯಲ್ಲಿ ವಾದ ಮಂಡಿಸಿದ ಹೆಚ್ಚಿನ ಅನುಭವ ಹೊಂದಿರಲಿಲ್ಲ. ಅಲ್ಲದೆ ಈ ಪ್ರಕರಣದಲ್ಲಿ ಸಾಕ್ಷಿಗಳನ್ನು ಆಯ್ಕೆ ಮಾಡಿರುವ ಕ್ರಮವೂ ಪ್ರಕರಣದ ತೀರ್ಪಿಗೆ ಪೂರಕವಾಗಿದೆಯೇ ಎಂಬ ಅನುಮಾನವನ್ನು ಮೂಡಿಸಿದೆ. ಕೆಲವು ಸಾಕ್ಷಿಗಳು ಅಸೀಮಾನಂದನಿಗೆ ನಿಕಟವಾಗಿದ್ದರು.

    ಒಟ್ಟು 226 ಸಾಕ್ಷಿಗಳ ಪೈಕಿ ಕನಿಷ್ಟ 64 ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿದ್ದರು. ಸುದ್ದಿಮಾಧ್ಯಮದ ವರದಿ ತಿಳಿಸಿರುವಂತೆ, ಹೀಗೆ ಪ್ರತಿಕೂಲ ಸಾಕ್ಷಿಗಳಾಗಿ ಬದಲಾದವರಲ್ಲಿ ಕನಿಷ್ಟ 6 ಮಂದಿ ಮಾಲೆಗಾಂವ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿ ಜೈಲಿನಲ್ಲಿದ್ದರೂ ಇವರನ್ನು ಸಾಕ್ಷಿಗಳೆಂದು ಹೆಸರಿಸಲಾಗಿತ್ತು. ಇವರಲ್ಲಿ ಲೆ.ಕ. ಪ್ರಸಾದ್ ಶ್ರೀಕಾಂತ್ ಪುರೋಹಿತ್ (ಸಾಕ್ಷಿ ನಂ. 106) ಹೆಸರೂ ಸೇರಿದೆ. ಅಸೀಮಾನಂದ ಡಿ.2007ರಂದು ಪುರೋಹಿತ್‌ನನ್ನು ಭೇಟಿಯಾಗಿದ್ದ ಹಾಗೂ ಅಜ್ಮೇರ್ ಬಾಂಬ್ ಸ್ಫೋಟದ ಪ್ರಧಾನ ಆರೋಪಿ ಸುನಿಲ್ ಜೋಷಿ ಕುರಿತು ಅವರು ಮಾತನಾಡಿದ್ದರು ಎಂದು ಸಾಧಿಸುವ ಉದ್ದೇಶದಿಂದ ಪುರೋಹಿತ್‌ನನ್ನು ಸಾಕ್ಷಿಯನ್ನಾಗಿ ಸೇರಿಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಆದರೆ ಅಸೀಮಾನಂದನ ಪರಿಚಯವಿದ್ದರೂ ತಾವಿಬ್ಬರೂ ಸುನಿಲ್ ಜೋಷಿಯ ಬಗ್ಗೆ ಹಾಗೂ ಆತನ ಕೊಲೆಯ ಬಗ್ಗೆ ಮಾತಾಡಿಲ್ಲ ಎಂದು ಕಳೆದ ಫೆಬ್ರವರಿಯಲ್ಲಿ ಶ್ರೀಕಾಂತ್ ಪುರೋಹಿತ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದ. ಅಲ್ಲದೆ ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ತನಿಖಾ ಸಮಿತಿಗೆ ಯಾವುದೇ ಹೇಳಿಕೆ ನೀಡಲು ಪುರೋಹಿತ್ ನಿರಾಕರಿಸಿದ್ದ.

 ಇದೇ ರೀತಿ ಸಾಕ್ಷಿ ನಂ. 107, ಸಮೀರ್ ಶರದ್ ಕುಲಕರ್ಣಿ ಕೂಡಾ ಈ ಸಂದರ್ಭ ನಾಶಿಕ್ ಜೈಲಿನಲ್ಲಿದ್ದ. ಇದೇ ರೀತಿ ರಮೇಶ್ ಉಪಾಧ್ಯಾಯ, ಅಜಯ್ ರಹೀರ್‌ಕರ್, ಶಿವ್ ನಾರಾಯಣ್ ಕಲ್‌ಸಂಗ್ರ ಹಾಗೂ ಶ್ಯಾಮ್ ಸಾಹು ಮುಂತಾದವರೂ ಆರೋಪ ಸಾಬೀತುಪಡಿಸಲು ಪೂರಕವಾದ ಸಾಕ್ಷಿ ಹೇಳುತ್ತಾರೆ ಎಂದು ಎನ್‌ಐಎ ನಿರೀಕ್ಷಿಸಿತ್ತು. ಆದರೆ ಇದು ಹುಸಿಯಾಗಿದೆ ಎಂದು ಮೂಲಗಳು ತಿಳಿಸಿವೆ.

 ಆದರೆ ಪ್ರತಿಕೂಲ ಸಾಕ್ಷಿಗಳಾಗುತ್ತಾರೆ ಎಂದು ಅರಿವಿದ್ದರೂ ಇಂತಹ ಸಾಕ್ಷಿಗಳ ಮೇಲೆ ನಂಬಿಕೆ ಇರಿಸಿರುವ ಎನ್‌ಐಎಯ ಬುದ್ಧಿವಂತಿಕೆಯ ಬಗ್ಗೆ ಎನ್‌ಐಎ ಮಾಜಿ ಅಭಿಯೋಜಕರಾಗಿದ್ದ ರೋಹಿಣಿ ಸಾಲಿಯಾನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಂದು ಸಂಘಟನೆಯ ಕಾರ್ಯಕರ್ತರು ಪರಸ್ಪರ ವಿರುದ್ಧವಾಗಿ ಹೇಳಿಕೆ ನೀಡುತ್ತಾರೆಂದು ನಿರೀಕ್ಷಿಸಲು ಸಾಧ್ಯವೇ. ಎನ್‌ಐಎ ತನ್ನದೇ ಆದ ಸಾಕ್ಷಿಗಳನ್ನು ಹೊಂದಿರಬೇಕಿತ್ತು ಎಂದವರು ಹೇಳಿದ್ದಾರೆ.

   ಆದರೆ ಸಾಕ್ಷಿಗಳ ಕುರಿತ ನಿರ್ಧಾರವನ್ನು ತಾನು ತೆಗೆದುಕೊಂಡಿಲ್ಲ. ಅದು ಈ ಮೊದಲೇ ನಿಗದಿಯಾಗಿತ್ತು ಎಂದು ಎನ್‌ಐಎಯ ಅಭಿಯೋಜಕ ಎನ್.ಹರಿನಾಥ್ ತಿಳಿಸಿದ್ದಾರೆ. ಸಾಕ್ಷಿಗಳನ್ನು ಆಯ್ಕೆ ಮಾಡಿರುವುದು ಸಿಬಿಐ. ಆರೋಪಪಟ್ಟಿ ಸಿದ್ಧಪಡಿಸುವಲ್ಲೂ ತಾನು ಯಾವುದೇ ಪಾತ್ರ ವಹಿಸಿರಲಿಲ್ಲ ಎಂದು ಹರಿನಾಥ್ ತಿಳಿಸಿದ್ದಾರೆ. ಸೋಮವಾರ ಸುದ್ದಿಮಾಧ್ಯಮದ ವರದಿಯಲ್ಲಿ, ಭಯೋತ್ಪಾದಕ ಕೃತ್ಯಗಳ ವಿಚಾರಣೆ ನಡೆಸಲು ಹರಿನಾಥ್‌ಗೆ ಇರುವ ಅರ್ಹತೆ ಪ್ರಶ್ನಾರ್ಹ ಎಂದು ತಿಳಿಸಿತ್ತು. ವಿದ್ಯಾರ್ಥಿ ಜೀವನದಲ್ಲಿ, ವಿವಿಯಲ್ಲಿ ಕಲಿಯುತ್ತಿರುವಾಗ ಹರಿನಾಥ್ ಆರೆಸ್ಸೆಸ್‌ನ ವಿದ್ಯಾರ್ಥಿ ಸಂಘಟನೆ ಎಬಿವಿಪಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News