ಅಗ್ನಿಶಾಮಕ ಸೇವಾ ಸಪ್ತಾಹ: ರ್ಯಾಲಿ

Update: 2018-04-19 10:28 GMT

ಮಂಗಳೂರು, ಎ.19: ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಪಾಂಡೇಶ್ವರ ಅಗ್ನಿಶಾಮಕ ಠಾಣೆ ವತಿಯಿಂದ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಅಗ್ನಿಶಾಮಕ ರ್ಯಾಲಿಯು ನಗರದ ಜ್ಯೋತಿ ವೃತ್ತದಿಂದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯವರೆಗೆ ಗುರುವಾರ ನಡೆಯಿತು.

ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ ರ್ಯಾಲಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೇಸಿಗೆ ದಿನಗಳಲ್ಲಿ ಅಗ್ನಿ ದುರಂತಗಳ ಸಂಭವಗಳು ಹೆಚ್ಚಿರುತ್ತವೆ. ಅಗ್ನಿ ಆಕಸ್ಮಿಕಗಳನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚು ಒತ್ತು ಕೊಡಬೇಕಾಗಿರುವುದು ಅವಶ್ಯವಾಗಿದೆ ಎಂದರು.

ಮುಖ್ಯ ಅಗ್ನಿಶಾಮಕ ಅಧಿಕಾರಿ ಟಿ. ಎನ್. ಶಿವಶಂಕರ್ ಮಾತನಾಡಿ, 1944 ಎಪ್ರಿಲ್ 14ರಂದು ಮುಂಬಯಿಯಲ್ಲಿ ಘಟಿಸಿದ ಅಗ್ನಿ ದುರಂತದಲ್ಲಿ ಜೀವತ್ಯಾಗ ಮಾಡಿದ ಅಗ್ನಿಶಾಮಕ ಸಿಬಂದಿಯ ನೆನಪಿಗಾಗಿ ಪ್ರತಿವರ್ಷ ಈ ಸಪ್ತಾಹ ನಡೆಯುತ್ತಿದೆ. ಎಪ್ರಿಲ್ 14ರಿಂದ 20ರ ತನಕ ಅಗ್ನಿಶಾಮಕ ಸೇವಾ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ಅಗ್ನಿ ದುರಂತಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸುಮಾರು 60ಕ್ಕೂ ಹೆಚ್ಚು ಸಿಬಂದಿ ರ್ಯಾಲಿಯಲ್ಲಿ ಪಾಲ್ಗೊಂಡರು. ಏರಿಯಲ್ ಲ್ಯಾಡರ್ ಪ್ಲಾಟ್‌ ಫಾರ್ಮ್, ಅಡ್ವಾನ್ಸ್‌ಡ್ ರೆಸ್ಕ್ಯೂ ವಾಹನ, ಎರಡು ವಾಟರ್ ಬೌಸರ್ಸ್‌, ನೀರು ತುಂಬಿದ ಲಾರಿ, ನಾಲ್ಕು ಅಗ್ನಿ ಬೈಕ್, ಮೂರು ಜೀಪ್ ಮುಂತಾದ ವಾಹನಗಳು ಪಾಲ್ಗೊಂಡವು.

ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶೇಖರ್, ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ್‌ಕುಮಾರ್, ಕದ್ರಿ ಅಗ್ನಿಶಾಮಕ ಅಧಿಕಾರಿ ಸುನಿಲ್‌ಕುಮಾರ್ ಮತ್ತಿತರರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News